ವಿದ್ಯಾರ್ಥಿ ದೆಸೆಯಲ್ಲಿಯೇ ಸಾಹಿತ್ಯಾಸಕ್ತಿ ಬೆಳೆಸಿಕೊಂಡಲ್ಲಿ ವಿಶೇಷ ಆನಂದ ಪ್ರಾಪ್ತಿ: ಮುರಳೀಧರ ಉಪಾಧ್ಯ

ಉಡುಪಿ: ಒಳ್ಳೆಯ ಓದು ಒಳ್ಳೆಯ ಬರವಣಿಗೆಗೆ ಪ್ರೇರಣೆಯನ್ನು ನಿಡುತ್ತದೆ. ವಿದ್ಯಾರ್ಥಿ ಜೀವನದಲ್ಲಿಯೇ ಬರವಣಿಗೆಯ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು. ಸಾಹಿತ್ಯವನ್ನು ಓದುವುದು ಮತ್ತು ಬರೆಯುವುದರಿಂದ ಜೀವನದಲ್ಲಿ ಒಂದು ವಿಶೇಷ ಆನಂದವನ್ನು ಪಡೆಯಲು ಸಾಧ್ಯ ಎಂದು ಸಾಹಿತ್ಯ ಅಕಾಡೆಮಿ ನವ-ದೆಹಲಿಯ ಮಾಜಿ ಸದಸ್ಯ ಮುರಳೀಧರ ಉಪಾಧ್ಯ ಅಭಿಪ್ರಾಯಪಟ್ಟರು.

ಅವರು ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿನ ಐ.ಕ್ಯೂ.ಎ.ಸಿ ಮತ್ತು ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಕಾಲೇಜಿನ ಸಾಹಿತ್ಯ ಸಂಘದ 2023-24 ನೇ ಸಾಲಿನ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲಪ್ರೊ. ಭಾಸ್ಕರ್ ಎಸ್. ಶೆಟ್ಟಿ, ಸಾಹಿತ್ಯ ಲೋಕವನ್ನು ಅರ್ಥಮಾಡಿಕೊಳ್ಳಲು ವಿಶಾಲ ಮನಸ್ಸು ಮತ್ತು ಹೃದಯವಂತಿಕೆ ಬೇಕು. ಸಾಹಿತ್ಯ ಸಂಘದ ಚಟುವಟಿಕೆಗಳು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಹೆಚಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಸಾಹಿತ್ಯ ಸಂಘದ 2023-24 ನೇ ಸಾಲಿನ ಸಂಚಾಲಕಿಯಾಗಿ ಅಮೃತ ಎ. ಎಂ ತೃತೀಯ ಬಿ. ಎ, ಉಪ ಸಂಚಾಲಕಿಯರಾಗಿ ಚೈತ್ರ ಕೆ. ಸಿ ಮತ್ತು ಮಂಗಳಗೌರಿ ತೃತೀಯ ಬಿ. ಎ, ಪ್ರಧಾನ ಸಂಘಟನಾ ಕಾರ್ಯದರ್ಶಿಗಳಾಗಿ ದಿವ್ಯ, ಅಪೂರ್ವ ಮತ್ತು ಕೃತಿ ತೃತೀಯ ಬಿ. ಎ. ಆಯ್ಕೆಯಾಗಿ ಪ್ರಾಂಶುಪಾಲರಿಂದ ಗೌರವವನ್ನು ಸ್ವೀಕರಿಸಿದರು.

ಕಾಲೇಜಿನ ಸಾಹಿತ್ಯ ಸಂಘದ ಸಂಚಾಲಕಿ ಪ್ರೊ. ನಿಕೇತನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ರವಿರಾಜ್ ಶೆಟ್ಟಿ , ಸಹ ಪ್ರಾಧ್ಯಾಪಕಡಾ. ಪಿ. ಬಿ. ಪ್ರಸನ್ನ ಮತ್ತು ಐ.ಕ್ಯೂ.ಎ.ಸಿ. ಸಂಚಾಲಕ ಸೋಜನ್ ಕೆ. ಜಿ ಉಪಸ್ಥಿತರಿದ್ದರು.