ಮಗಳಿಂದ ಸ್ಪೆಷಲ್​ ಫೋಟೋ ಶೇರ್​ : 50 ವರ್ಷ ದಾಂಪತ್ಯ ಪೂರೈಸಿದ ಅಮಿತಾಭ್​ ಬಚ್ಚನ್​- ಜಯಾ

ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ಮತ್ತು ಜಯಾ ಬಚ್ಚನ್​ ದಂಪತಿ ತಮ್ಮ ದಾಂಪತ್ಯ ಜೀವನದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ. ನಟ ಅಮಿತಾಭ್​ ಬಚ್ಚನ್​ ಮತ್ತು ಜಯಾ ಬಚ್ಚನ್​ ದಂಪತಿ 50ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
ಈ ವಿಶೇಷ ಸಂದರ್ಭದಲ್ಲಿ ಬಿಗ್​ ಬಿ ಮಗಳು ಶ್ವೇತಾ ಬಚ್ಚನ್​ ಸೋಶಿಯಲ್​ ಮೀಡಿಯಾದಲ್ಲಿ ತಂದೆ- ತಾಯಿಯ ಹಳೆಯ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅವರಿಬ್ಬರ ಬಗ್ಗೆ ಸುಂದರ ಟಿಪ್ಪಣಿಯನ್ನು ಬರೆದಿದ್ದಾರೆ. ಈ ಚಿತ್ರಕ್ಕೆ ಅಭಿಮಾನಿಗಳು ಲೈಕ್ಸ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ.
ಇನ್​ಸ್ಟಾದಲ್ಲಿ ಬ್ಲ್ಯಾಕ್​ ಅಂಡ್​ ವೈಟ್​ ಫೋಟೋವನ್ನು ಹಂಚಿಕೊಂಡು, “50 ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಈಗ ನೀವು ಗೋಲ್ಡನ್​ ಆಗಿದ್ದೀರಿ. ಸುದೀರ್ಘ ದಾಂಪತ್ಯದ ರಹಸ್ಯವೇನು ಎಂದು ತಾಯಿಯಲ್ಲಿ ಕೇಳಿದಾಗ ಆಕೆ ಉತ್ತರಿಸಿದಳು- ಪ್ರೀತಿ” ಎಂದು ಸುಂದರ ವಾಕ್ಯಗಳನ್ನು ಬರೆದಿದ್ದಾರೆ.
ಈ ಫೋಟೋ ತುಂಬಾ ಹಳೆಯದಾದರು ವಿಶೇಷವಾಗಿದೆ. ನೆಟ್ಟಿಗರು ಶ್ವೇತಾ ಬಚ್ಚನ್​ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದು, ದಂಪತಿಗೆ 50ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ. ಅಭಿಮಾನಿಯೊಬ್ಬರು, ಅವರಿಗೆ ವಾರ್ಷಿಕೋತ್ಸವದ ಶುಭಾಶಯಗಳು. ನೀವು 50 ಮತ್ತು ಅದಕ್ಕೂ ಹೆಚ್ಚು ವರ್ಷ ಒಟ್ಟಾಗಿ ಬಾಳಿರಿ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಎಂದು ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬರು, ನಿಮ್ಮ ತಂದೆ ತಾಯಿಗೆ 50 ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ದೇವರು ಆಶೀರ್ವದಿಸಲಿ ಎಂದು ಬರೆದಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಜೋಯಾ ಅಖ್ತರ್, ಚಂಕಿ ಪಾಂಡೆ ಮತ್ತು ಅಪೂರ್ವ ಮೆಹ್ತಾ ಸೇರಿದಂತೆ ಇತರ ಸೆಲೆಬ್ರಿಟಿಗಳು ಅಮಿತಾಭ್​ ಬಚ್ಚನ್​ ಮತ್ತು ಜಯಾ ಬಚ್ಚನ್​ ದಂಪತಿಗೆ ಶುಭ ಹಾರೈಸಿದ್ದಾರೆ.

ಜಯಾ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಶಬಾನಾ ಅಜ್ಮಿ, ಧರ್ಮೇಂದ್ರ, ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜುಲೈ 28 ರಂದು ಚಿತ್ರವು ಥಿಯೇಟರ್‌ಗೆ ಬರಲು ಸಿದ್ಧವಾಗಿದೆ.
ಇನ್ನು ಬಿಗ್​ ಬಿ ಸಿನಿಮಾ ವಿಚಾರವಾಗಿ ಹೇಳುವುದಾದರೆ, ಅಮಿತಾಭ್ ಮುಂದೆ ನಾಗ್ ಅಶ್ವಿನ್ ಅವರ ಪ್ರಾಜೆಕ್ಟ್ ಕೆ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ದಿಶಾ ಪಟಾನಿ ಸಹ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮುಂದಿನ ವರ್ಷ ಜನವರಿ 12ಕ್ಕೆ ಚಿತ್ರ ಬಿಡುಗಡೆಯಾಗಲಿದೆ.