ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ಆರಂಭಿಸಿರುವ ವಿಶೇಷ ನೇತ್ರ ಚಿಕಿತ್ಸಾ ವಿಭಾಗ ಮತ್ತು ಎಕ್ಸ್ಪ್ರೆಸ್ ಕ್ಲಿನಿಕ್ ವಿಭಾಗವನ್ನು ಶುಕ್ರವಾರ ಉದ್ಘಾಟನೆಗೊಂಡಿತು.
ಮಕ್ಕಳ ನೇತ್ರ ಚಿಕಿತ್ಸಾಲಯವನ್ನು ಆಸ್ಪತ್ರೆಯ ಡೀನ್ ಡಾ. ಶರತ್ ಕುಮಾರ್ ರಾವ್ ಮತ್ತು ಎಕ್ಸ್ಪ್ರೆಸ್ ನೇತ್ರ ಚಿಕಿತ್ಸಾಲಯವನ್ನು ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ. ಜಿ. ಮುತ್ತಣ್ಣ ಉದ್ಘಾಟಿಸಿದರು.
ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಡಾ ಚಿರಂಜೊಯ್ ಮುಖೋಪಾಧ್ಯಾಯ್, ಡಾ ಪದ್ಮರಾಜ್ ಹೆಗ್ಡೆ ಮತ್ತು ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುಲತಾ ವಿ ಭಂಡಾರಿ ಉಪಸ್ಥಿತರಿದ್ದರು.
ಮಕ್ಕಳಿಗೆ ಮತ್ತು ಪೋಷಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಕಣ್ಣಿನ ವಿಭಾಗವು ರಜಾ ದಿನದಂದು ತೆರೆದಿರುತ್ತದೆ. ಪ್ರತಿ ಶನಿವಾರ (ಮೂರನೇ ಶನಿವಾರ ಹೊರತುಪಡಿಸಿ) ಮಧ್ಯಾಹ್ನ 1.30 ರಿಂದ ಸಂಜೆ 4.30 ರವರೆಗೆ ಈ ಚಿಕಿತ್ಸಾಲಯದಲ್ಲಿ ಸೇವೆ ದೊರೆಯಲಿದೆ.
ಮಕ್ಕಳಲ್ಲಿ ಕಂಡು ಬರುವ ದೃಷ್ಟಿ ದೋಷ, ಕಣ್ಣಿನ ಪೊರೆಯ ತೊಂದರೆ, ಮೆಳ್ಳೆಗಣ್ಣು, ಅಂಬ್ಲ್ಯೋಪಿಯಾ ಮತ್ತು ಇತರ ತೊಂದರೆಗಳಿಗೆ ಚಿಕಿತ್ಸೆ ನೀಡಲಾಗುವುದು. ಅಲ್ಲದೇ, ಕರಿ ಗುಡ್ಡೆ, ಅಕ್ಷಿಪಟಲ ಅಥವಾ ಗ್ಲುಕೋಮಾ ತೊಂದರೆ ಇದ್ದರೆ ಅದಕ್ಕೆ ಸಂಬಂಧ ಪಟ್ಟ ತಜ್ಞರಿಂದ ಚಿಕಿತ್ಸೆ ನೀಡಲಾಗುವುದು.
ಚಿಕ್ಕ ಮಕ್ಕಳಲ್ಲಿಯೂ ಉತ್ತಮ ದೃಷ್ಟಿಗಾಗಿ ಕೆಲವೊಮ್ಮೆ ಕನ್ನಡಕದ ಅವಶ್ಯಕತೆ ಇರಬಹುದು ಮತ್ತು ಮೆಳ್ಳೆಗಣ್ಣು ದೃಷ್ಟಿಯ ಬೆಳವಣಿಗೆಗೆ ಹಾನಿ ಮಾಡುತ್ತದೆ. ಆದ್ದರಿಂದ ಯಾವುದಾದರು ಮಕ್ಕಳಲ್ಲಿ ದೂರ ದೃಷ್ಟಿ ಅಥವಾ ಸಮೀಪ ದೃಷ್ಟಿ ದೋಷವಿದ್ದರೆ, ಮೆಳ್ಳೆಗಣ್ಣು, ಪದೇ ಪದೇ ಕಣ್ಣನ್ನು ಮುಚ್ಚುವುದು ಅಥವಾ ಉಜ್ಜಿಕೊಳ್ಳುತ್ತಿದ್ದರೆ ಅವರನ್ನು ಶೀಘ್ರವೇ ಕಣ್ಣಿನ ತಜ್ಞರ ಬಳಿಗೆ ಕರೆದುಕೊಂಡು ಹೋಗಬೇಕು. ಮಕ್ಕಳ ನೇತ್ರ ಚಿಕಿತ್ಸಾಲಯವು ಮಕ್ಕಳ ಕಣ್ಣಿನ ದೋಷದ ನಿರ್ವಹಣೆಗೆ ಸಮಗ್ರವಾದ ಆರೈಕೆ ಒದಗಿಸುವ ಆಶಯವನ್ನು ಹೊಂದಿದೆ.
ಈ ಸೌಲಭ್ಯವು ಪೂರ್ವನಿಗದಿತ ಆಧಾರದ (with appointment) ಮೇಲೆ ಮಾತ್ರ ದೊರೆಯಲಿದೆ. ಕನ್ನಡಕ ಬದಲಾವಣೆ, ಕಣ್ಣಲ್ಲಿ ಚುಚ್ಚುವಿಕೆ, ಕೆಂಗಣ್ಣು, ಕಣ್ಣಿನಲ್ಲಿ ನೀರಿಳಿಯುವಿಕೆ, ಕಣ್ಣಿಗೆ ಔಷಧಿ ಹಾಕದೆ ಡಯಾಬಿಟಿಕ್ ರೆಟಿನೋಪತಿ ತಪಾಸಣೆ ಮತ್ತು ಮುಂತಾದ ತೊಂದರೆಗಳಿಗೆ ಕಾಯದೆ ವೇಗವಾಗಿ ಕಣ್ಣಿನ ಚಿಕಿತ್ಸೆಯನ್ನು ಬಯಸುವ ರೋಗಿಗಳ ಅಗತ್ಯಗಳನ್ನು ಪೂರೈಸುವುದೇ ಈ ಎಕ್ಸ್ಪ್ರೆಸ್ ಕ್ಲಿನಿಕ್ಕಿನ ಉದ್ದೇಶವಾಗಿದೆ. ಈ ಸೌಲಭ್ಯವು ದೃಷ್ಟಿ ಪರೀಕ್ಷೆ, ಕಣ್ಣಿಗೆ ಔಷಧಿ ಹಾಕದೆ ಕಣ್ಣಿನ ಪರೀಕ್ಷೆಗೆ ಅನ್ವಯಿಸುತ್ತದೆ. (ಕಣ್ಣಿನ ಪೊರೆ / ಗ್ಲುಕೋಮಾ / ರೆಟಿನಾ ಇತ್ಯಾದಿ ವಿವರವಾದ ಪರೀಕ್ಷೆಗಳಿಗೆ ಇದು ಅನ್ವಯಿಸುವುದಿಲ್ಲ). ಕಾಯ್ದಿರಿಸಲು ಹಾಗೂ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0820 2923 780 ಸಂಪರ್ಕಿಸಬಹುದು.