ರಾಜ್ಯ ಮೀನುಗಾರರ ಸಹಕಾರ ಸಂಘಗಳ ರಾಜ್ಯಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮ

ಉಡುಪಿ: ಸರಕಾರದ ಅನುದಾನ, ಸಹಕಾರ ಸಿಗದೆ ಸಹಕಾರಿ ಕ್ಷೇತ್ರ ಕುಂಠಿತವಾಗಿದ್ದು ಮೀನುಗಾರಿಕೆ, ಒಳನಾಡು ಮೀನುಗಾರಿಕೆಯ ಪ್ರಗತಿ, ಭವಿಷ್ಯದ ಉದ್ಯೋಗ ಸೃಷ್ಟಿಗೆ ಉತ್ತೇಜನ ಅತ್ಯಗತ್ಯ ಎಂದು ಕರ್ನಾಟಕ ರಾಜ್ಯ ಸಹಕಾರ ಮೀನುಗಾರರ ಮಹಾಮಂಡಳ(ಮೈಸೂರು) ಅಧ್ಯಕ್ಷ ಹೆಚ್. ಜಿ. ಮಂಜಪ್ಪ ತಿಳಿಸಿದ್ದಾರೆ.

ಅವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ(ಬೆಂಗಳೂರು), ಕರ್ನಾಟಕ ರಾಜ್ಯ ಸಹಕಾರ ಮೀನುಗಾರರ ಮಹಾಮಂಡಳ(ಮೈಸೂರು), ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಉಡುಪಿ ಜಿಲ್ಲಾ ಸಹಕಾರ ಇಲಾಖೆ ಸಹಯೋಗದಲ್ಲಿ ರಾಜ್ಯದ ಮೀನುಗಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ಕಾರ್ಯದಕ್ಷತೆ ಕುರಿತು ಉಡುಪಿ ಮಣಿಪಾಲ ರಸ್ತೆಯ ಕಡಿಯಾಳಿ ಜಂಕ್ಷನ್‍ನಲ್ಲಿರುವ ಹೋಟೆಲ್ ದ ಓಷ್ಯನ್ ಪರ್ಲ್ ಸಭಾಂಗಣದಲ್ಲಿ ರಾಜ್ಯಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

1956ರಲ್ಲಿ ಮೀನುಗಾರಿಕಾ ಕ್ಷೇತ್ರದಲ್ಲಾಗುತ್ತಿದ್ದ ಒಂದು ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಆರು ದಶಕಗಳಲ್ಲಿ 12.25ಲಕ್ಷ ಟನ್ನುಗಳಿಗೇರಿದೆ ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ(ಬೆಂಗಳೂರು) ಕಾರ್ಯದರ್ಶಿ ಲಕ್ಷ್ಮೀಪತಯ್ಯ ಮಾತನಾಡಿ, ಕರಾವಳಿಯಲ್ಲಿ ಸಹಕಾರಿ ವ್ಯವಸ್ಥೆ ವ್ಯವಸ್ಥಿತವಾಗಿದ್ದು ಪೈಪೋಟಿ ಎದುರಿಸುತ್ತಿದೆ. ಕಟ್ಟಿದ ಸಹಕಾರಿ ಸಂಘಗಳನ್ನು ಉಳಿಸೋದು ಕಷ್ಟಕರವಾಗಿದೆ. ಪ್ರಾಮಾಣಿಕವಾಗಿ ಉತ್ತಮ ಕೆಲಸದ ಮನೋಭಾವ ಬೇಕು. ವಿಧಾನಪರಿಷತ್ತಿನಲ್ಲಿ ಸಹಕಾರಿ ಕ್ಷೇತ್ರಕ್ಕೊಂದು ಪ್ರಾತಿನಿಧ್ಯದ ಜತೆಗೆ ಸಹಕಾರಿ ವಿವಿ ಸ್ಥಾಪನೆಯ ಅಗತ್ಯವಿದೆ. ಮೀನು ತಿನ್ನಿಸುವ ಬದಲು ಮೀನು ಹಿಡಿಯುವುದನ್ನು ಕಲಿಸಬೇಕು ಎಂದು ತಿಳಿಸಿದರು.

ಉಡುಪಿ ಜಿಲ್ಲಾ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕ ಕೆ. ಮಹೇಶ್ವರಪ್ಪ ಮಾತನಾಡಿ, ಕರಾವಳಿ ಸಹಕಾರಿ ಕ್ಷೇತ್ರದಲ್ಲಿ ಕಾರ್ಯ ಸಂಕೃತಿ ವಿಭಿನ್ನವಾಗಿದ್ದು ಬದ್ಧತೆ, ಕಾರ್ಯದಕ್ಷತೆ ಶೇ. 90ಕ್ಕಿಂತ ಅಧಿಕವಿದೆ ಎಂದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿ, ಜ್ಞಾನದ ಬೀಜ ಬಿತ್ತಿದರೆ ನಿರಂತರ ಫಲ ಸಿಗುತ್ತದೆ. ಕಾನೂನು ಬದಲಾವಣೆಗೆ ಅನುಗುಣವಾಗಿ ಆಡಳಿತ ಧರ್ಮ ಪಾಲಿಸಬೇಕು. ಸದಸ್ಯರು, ಸಾರ್ವಜನಿಕರಿಗಾಗಿ ಹೋರಾಟ ನಡೆಸಲಾಗುತ್ತಿದ್ದು ಸಹಕಾರಿ ಕ್ಷೇತ್ರದ ಆರೋಗ್ಯಕರ ಬೆಳವಣಿಗೆ, ಜನೋಪಯೋಗಿಯಾಗಿ ಆಗಬೇಕು. ಸಹಕಾರಿ ಸಂಸ್ಥೆಗಳಿಗೆ ವಿಧಿಸುತ್ತಿರುವ ಜಿಎಸ್‍ಟಿ ದರ ಕನಿಷ್ಠಕ್ಕಿಳಿಸಬೇಕು. ಜನರು, ಸದಸ್ಯರಿಗೆ ತೊಂದರೆಯಾದರೆ ಹೋರಾಟಕ್ಕೆ ಬದ್ಧ ಎಂದು ಹೇಳಿದರು.

ಮೀನುಗಾರರ ಮಹಾಮಂಡಳ(ಮೈಸೂರು) ಅಧ್ಯಕ್ಷ ಹೆಚ್. ಜಿ. ಮಂಜಪ್ಪ ಇವರನ್ನು ಗೌರವಿಸಲಾಯಿತು. ತರಬೇತಿದಾರ ಡಾ. ಗುರುಸ್ವಾಮೀ, ಜಂಟಿ ನಿರ್ದೇಶೇಕ ವಿವೇಕ ಆರ್ ಇಲಾಖೆಯ ಸವಲತ್ತುಗಳನ್ನು ವಿವರಿಸಿದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ಸಿಇಒ ಹಾಲಪ್ಪ ಕೋಡಿಹಳ್ಳಿ, ಕರ್ನಾಟಕ ರಾಜ್ಯ ಸಹಕಾರ ಮೀನುಗಾರರ ಮಹಾಮಂಡಳ(ಮೈಸೂರು) ನಿರ್ದೇಶಕ ಅಂಜು ಬಾಬು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಹರೀಶ್ ಕಿಣಿ ಅಲೆವೂರು, ಮಂಜಯ್ಯ ಶೆಟ್ಟಿ, ಕಟಪಾಡಿ ಶಂಕರ ಪೂಜಾರಿ, ಮನೋಜ್ ಕರ್ಕೇರ, ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ(ಬೆಂಗಳೂರು) ವ್ಯವಸ್ಥಾಪಕ ನಿರ್ದೇಶಕ ಡಾ. ಗುರುಸ್ವಾಮಿ ಉಪಸ್ಥಿತರಿದ್ದರು.

ಕವಿತಾ, ಪ್ರಮೀಳಾ ಸುರೇಶ್ ಪ್ರಾರ್ಥಿಸಿದರು. ಪಿ. ಶ್ರೀಧರ್ ನಿರೂಪಿಸಿದರು.