ಮಂಗಳೂರು: ಬೇಸಿಗೆಯ ಬಿಸಿ ಹವೆ ಬುದ್ಧಿ ಜೀವಿಯಾದ ಮನುಷ್ಯರಿಗೇ ಸಹಿಸಲಸಾಧ್ಯ. ಇಂತಹಾ ಸಂದರ್ಭದಲ್ಲಿ ಮೂಕಪ್ರಾಣಿಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವನ್ಯಜೀವಿಗಳ ರಕ್ಷಣೆಗೆ ಅಧಿಕಾರಿಗಳು ವಿಶೇಷ ಕ್ರಮಗಳನ್ನು ಕೈಗೊಂಡಿದ್ದಾರೆ.
ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ವ್ಯಾಪ್ತಿಯಲ್ಲಿರುವ ಈ ಮೃಗಾಲಯವು ಹಲವು ಪ್ರಾಣಿ-ಪಕ್ಷಿಗಳಿಗೆ ಆಶ್ರಯವಾಗಿದ್ದು, ಉಷ್ಣಾಂಶದ ಏರಿಕೆಯಿಂದಾಗಿ ಪ್ರಾಣಿಗಳಲ್ಲಿ ಶಾಖದ ಒತ್ತಡ ಕಾಣಿಸಿಕೊಂಡಿದೆ. ಇದನ್ನು ಪರಿಹರಿಸಲು ‘ಬೇಸಿಗೆ ನಿರ್ವಹಣಾ ಯೋಜನೆ’ಯನ್ನು ಜಾರಿಗೆ ಬಂದಿದೆ.
ಈ ಯೋಜನೆಯಡಿ ಪ್ರಾಣಿಗಳ ಆವರಣಗಳಲ್ಲಿ ಓವರ್ ಹೆಡ್ ಸ್ಪ್ರಿಂಕ್ಲರ್ ವ್ಯವಸ್ಥೆ ಅಳವಡಿಸಿ ನಿರಂತರವಾಗಿ ನೀರನ್ನು ಸಿಂಪಡಿಸಲಾಗುತ್ತಿದೆ. ಇದರಿಂದ ತಾಪಮಾನ ಕಡಿಮೆಯಾಗುವುದರೊಂದಿಗೆ ತಂಪಾದ ವಾತಾವರಣ ನಿರ್ಮಾಣವಾಗುತ್ತಿದೆ. ಹೆಚ್ಚುವರಿ ಬಿಸಿಯಿರುವ ಪ್ರದೇಶಗಳಲ್ಲಿ ಫ್ಯಾನ್ ಮತ್ತು ಕೂಲರ್‌ಗಳನ್ನು ಅಳವಡಿಸಿ ಪ್ರಾಣಿಗಳಿಗೆ ಆರಾಮದಾಯಕ ಪರಿಸರ ಕಲ್ಪಿಸಲಾಗಿದೆ.
ಹುಲಿ, ಚಿರತೆಗಳಂತಹ ಪ್ರಾಣಿಗಳಿಗೆ ನೀರಿನ ಕೊಳಗಳನ್ನು ನಿರ್ಮಿಸಿ, ಅವುಗಳು ಸಹಜವಾಗಿ ದೇಹದ ಉಷ್ಣತೆಯನ್ನು ನಿಯಂತ್ರಿಸಿಕೊಳ್ಳುವ ಅವಕಾಶ ಒದಗಿಸಲಾಗಿದೆ. ದಪ್ಪ ತುಪ್ಪಳ ಹೊಂದಿರುವ ಪ್ರಾಣಿಗಳಿಗೆ ವಿಶೇಷ ಕಾಳಜಿ ವಹಿಸಲಾಗುತ್ತಿದ್ದು, ಅವುಗಳ ಮೇಲೆ ನಿಯಮಿತವಾಗಿ ನೀರು ಸಿಂಪಡಿಸಲಾಗುತ್ತಿದೆ.
ಈಗಾಗಲೇ ಹಲವು ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿರುವ ಪಿಲಿಕುಳ ನಿಸರ್ಗಧಾಮ, ಈ ಬಾರಿ ಬೇಸಿಗೆಯಲ್ಲಿ ಪ್ರಾಣಿಗಳ ಆರೈಕೆಗೆ ಅನುಸರಿಸುತ್ತಿರುವ ನವೀನ ಕ್ರಮಗಳು ವಿಶಿಷ್ಟವಾಗಿವೆ.

















