ಉಡುಪಿ: ಪೇಜಾವರ ಶ್ರೀಪಾದರ ಆರೋಗ್ಯದಲ್ಲಿ ಶೀಘ್ರ ಸುಧಾರಣೆ ಕಾಣಲೆಂದು ವಿವಿಧ ಮಠ, ವಿದ್ಯಾಪೀಠ, ದೇಗುಲ ಹಾಗೂ ಸಂಘ ಸಂಸ್ಥೆಗಳಲ್ಲಿ ಶುಕ್ರವಾರ ವಿಶೇಷ ಪ್ರಾರ್ಥನೆ
ಸಲ್ಲಿಸಲಾಯಿತು.
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾ ಪೀಠ ಸೇರಿದಂತೆ ದೇಶಾದ್ಯಂತ ಇರುವ ಶ್ರೀಮಠದ 80ಕ್ಕೂ ಅಧಿಕ ಶಾಖೆಗಳಲ್ಲಿ ಶ್ರೀಗಳು ಗುಣಮುಖರಾಗಲಿ ಎಂದು ಅಭಿಮಾನಿಗಳು, ಶಿಷ್ಯರು, ಹಿತೈಷಿಗಳು ವಿಶೇಷ ಜಪ ಹವನ ಭಜನೆ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಶ್ರೀಗಳ ಅನಾರೋಗ್ಯದ ವಿಷಯ ತಿಳಿದ ಯೋಗಗುರು ಬಾಬಾ ರಾಮ್ದೇವ್ ಶ್ರೀಗಳ ಆರೋಗ್ಯ ಶೀಘ್ರ ಸುಧಾರಿಸಲೆಂದು ಪ್ರಾರ್ಥಿಸಿ ಹರಿದ್ವಾರದ ಪತಂಜಲಿ ಯೋಗ ಪೀಠದಲ್ಲಿ ವಿಶೇಷ ಭಜನೆ ಪ್ರಾರ್ಥನೆ ಸಲ್ಲಿಸಿದರು.
ಬೆಂಗಳೂರಿನ ಶ್ರೀ ಸೋಸಲೆ ವ್ಯಾಸರಾಜ ಮಠ ಮತ್ತು ಇತರ ಶಾಖಾ ಮಠಗಳಲ್ಲಿ ಶಿಷ್ಯರು ಪೇಜಾವರ ಶ್ರೀಗಳ ಆರೋಗ್ಯಕ್ಕಾಗಿ ಪ್ರಾರ್ಥಿಸಿ ವಿಶೇಷ ಪಾರಾಯಣ ನಡೆಸಿದರು. ಶ್ರೀಗಳ ಆರೋಗ್ಯ ಸುಧಾರಣೆಗೆ ಹರಿನಾಮ ಸಂಕೀರ್ತನೆ ವಿಶ್ವೇಶತೀರ್ಥ ಸ್ವಾಮೀಜಿ ಶೀಘ್ರ ಗುಣಮುಖವಾಗಲೆಂದು ಪ್ರಾರ್ಥಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಹಾಗೂ ಪಂಚರತ್ನ ಸೇವಾ ಟ್ರಸ್ಟ್ ವತಿಯಿಂದ ಹರಿನಾಮ ಸಂಕೀರ್ತನೆ
ಕಾರ್ಯಕ್ರಮ ನಡೆಸಲಾಯಿತು.ಶ್ರೀಕೃಷ್ಣ ಮಠದ ಚಂದ್ರಶಾಲೆಯಲ್ಲಿ,ಪ್ರಸ್ತುತ ಅಷ್ಟಮಠಾಧೀಶರಲ್ಲಿ ಹಿರಿಯರಾದ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಅರೋಗ್ಯ ಸುಧಾರಣೆಗಾಗಿ ಶ್ರೀಪಾದರ ಶಿಷ್ಯರು ಶ್ರೀವಿಷ್ಣುಸಹಸ್ರನಾಮ ಹಾಗೂ ವಾಯುಸ್ತುತಿ ಮೊದಲಾದ ಸೂಕ್ತ,ಸ್ತೋತ್ರ ಪಾರಾಯಣ ಮಾಡುವ ಮೂಲಕ ಪ್ರಾರ್ಥನೆ ನಡೆಸಿದರು.
ಉಡುಪಿ ನಗರ ವಲಯ ಭಜನಾ ಮಂಡಳಿಗಳ ಭಜಕರು ಹರಿನಾಮ ಸಂಕೀರ್ತನೆ ನಡೆಸಿಕೊಟ್ಟರು












