ಮಂಗಳೂರು ಬನ್ಸ್, ಮೈಸೂರು ಮಸಾಲೆ ದೋಸೆ ರುಚಿಗೆ ಮಾರುಹೋದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್!!

ಬೆಂಗಳೂರು: ಬೆಂಗಳೂರಿನಲ್ಲಿ ಮಂಗಳೂರಿನ ನೆಚ್ಚಿನ ಖಾದ್ಯ ಮಂಗಳೂರು ಬನ್ಸ್, ಮೈಸೂರು ಮಸಾಲೆ ದೋಸೆ ಮತ್ತು ಮಸಲಾಚಾಯ್ ಸವಿರುಚಿಗೆ ತಲೆದೂಗಿರುವ ಅವರು ಈ ಬಗ್ಗೆ X ನಲ್ಲಿ ಬರೆದುಕೊಂಡಿದ್ದಾರೆ.

ತನ್ನ ಕಾರು ಚಾಲಕನ ಮಾತಿಗೆ ಬೆಲೆಕೊಟ್ಟು ಆತನ ಮೆಚ್ಚಿನ ರೆಸ್ಟೋರೆಂಟ್ ನಲ್ಲಿ ಚಹಾ ಸವಿಯುವ ಸಲಹೆಗೆ ಮನ್ನಣೆ ನೀಡಿ ಒಳ್ಳೆಯ ಕೆಲಸ ಮಾಡಿದೆ ಎಂದು ಅವರು ಹೇಳಿದ್ದಾರೆ.

ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಜಾಂಟಿ ರೋಡ್ಸ್, ರಾಜಧಾನಿಯಲ್ಲಿ ಕೇರಳ ಸ್ಟಾರ್ಟ್‌ಅಪ್ ಮಿಷನ್ ಆಯೋಜಿಸಿದ ಹಡಲ್ ಗ್ಲೋಬಲ್ ಶೃಂಗಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದಾರೆ.

ಶನಿವಾರದಂದು ಯುವ ಉದ್ಯಮಿಗಳಿಗೆ ಕಿವಿಮಾತು ಹೇಳಿದ ಅವರು ಅಭ್ಯಾಸ, ಗಮನ ಮತ್ತು ಹೊಸತನದ ಮಹತ್ವವನ್ನು ಎತ್ತಿ ಹಿಡಿಯಲು ತಮ್ಮ ಕ್ರಿಕೆಟ್ ದಿನಗಳ ಅನೇಕ ಸ್ಮರಣೀಯ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

ಫೀಲ್ಡಿಂಗ್ ನಲ್ಲಿ ಇತರರಿಗಿಂತ ಭಿನ್ನವಾಗಿರಬೇಕು ಎಂಬ ಉತ್ಕಟೇಚ್ಛೆಯಿಂದ ಅವರು ಈ ಕ್ಷೇತ್ರದಲ್ಲಿ ಹೊಸತನವನ್ನು ಅಳವಡಿಸಿಕೊಂಡು ಸತತ ಅಭ್ಯಾಸ ಮತ್ತು ಪರಿಶ್ರಮ ಪಟ್ಟಿರುವುದನ್ನು ಹೇಳಿಕೊಂಡಿದ್ದಾರೆ. ಯುವ ಉದ್ಯಮಿಗಳೂ ಭಿನ್ನತೆ ಮತ್ತು ಹೊಸತನವನ್ನು ಅಳವಡಿಸಲು ಹಿಂದೇಟು ಹಾಕಬಾರದು ಎಂದು ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.