ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ(Soujanya Rape and Murder Case) ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಹಿರಿಯ ಐಪಿಎಸ್ ಅಧಿಕಾರಿ, ಐಜಿಪಿ ಶಶಿಕುಮಾರ್(Shashi Kumar) ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಎಂ.ಎ. ಸಲೀಂ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಸೌಜನ್ಯ ಸಾವಿಗೆ ನ್ಯಾಯ ಕೋರಿ ಬೀದಿಗಿಳಿದಿರುವ ಸೌಜನ್ಯ ಪರ ಹೋರಾಟಗಾರರು ಹಾಗೂ ಕುಟುಂಬಸ್ಥರು ಎಸ್ಐಟಿ ನೇತೃತ್ವ ವಹಿಸಿರುವ ಐಜಿಪಿ ಶಶಿಕುಮಾರ್ ಅವರ ವಿರುದ್ಧ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದರು.
ಶಶಿಕುಮಾರ್ ಈ ಹಿಂದೆ ಮಂಗಳೂರು ಕಮಿಷನರ್ ಆಗಿ ಕೆಲಸ ಮಾಡಿದ್ದರು. ಈ ವೇಳೆ ಧರ್ಮಸ್ಥಳದ ಜೊತೆಗೆ ಶಶಿಕುಮಾರ್ ಅವರಿಗೆ ಸಾಕಷ್ಟು ಒಡನಾಟ ಇತ್ತು. ಈ ವಿಚಾರ ಇಟ್ಟುಕೊಂಡು ಸೌಜನ್ಯ ಪರ ಹೋರಾಟಗಾರರು ಶಶಿಕುಮಾರ್ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ತನಿಖೆಯಿಂದ ನ್ಯಾಯ ಸಿಗುವ ಬಗ್ಗೆ ಅಪಸ್ವರ ಎತ್ತಿದ್ದ ಹೋರಾಟಗಾರರು, ಅವರ ಕಾರ್ಯವೈಖರಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಈ ವಿವಾದಗಳು ತನಿಖೆಯ ಪಾರದರ್ಶಕತೆಯ ಮೇಲೆ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ, ಶಶಿಕುಮಾರ್ ಅವರೇ ಸ್ವಯಂಪ್ರೇರಿತರಾಗಿ ಪ್ರಕರಣದ ತನಿಖಾ ಹೊಣೆಯಿಂದ ತಮ್ಮನ್ನು ಕೈಬಿಡುವಂತೆ ಡಿಜಿಪಿಯವರಿಗೆ ವಿನಂತಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಐಜಿಪಿ ಶಶಿಕುಮಾರ್ ಅವರ ಮನವಿಯ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಉನ್ನತ ಮಟ್ಟದಲ್ಲಿ ಹೊಸ ಮುಖ್ಯಸ್ಥರ ನೇಮಕಕ್ಕೆ ಚಾಲನೆ ದೊರೆತಿದೆ. ಸದ್ಯ ಎಸ್ಐಟಿ ಮುಖ್ಯಸ್ಥ ಸ್ಥಾನಕ್ಕೆ ಮೂವರು ಪ್ರಮುಖ ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರುಗಳು ಮುನ್ನೆಲೆಗೆ ಬಂದಿವೆ
ತನಿಖೆಯನ್ನು ಅತ್ಯಂತ ನಿಷ್ಪಕ್ಷಪಾತವಾಗಿ ಹಾಗೂ ಚುರುಕಾಗಿ ಮುನ್ನಡೆಸಬಲ್ಲ ದಕ್ಷ ಅಧಿಕಾರಿಗೆ ಈ ಮಹತ್ವದ ಹೊಣೆಗಾರಿಕೆಯನ್ನು ವಹಿಸಲು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ. ಐಜಿಪಿಗಳಾದ ಲಾಭೂರಾಮ್, ಚೇತನ್ ಸಿಂಗ್ ರಾಥೋಡ್, ಡಾ. ಬೋರಲಿಂಗಯ್ಯ ಪೈಕಿ ಒಬ್ಬರಿಗೆ ಮುಖ್ಯಸ್ಥ ಸ್ಥಾನ ಸಿಗುವ ಸಾಧ್ಯತೆಯಿದೆ.















