ಕುಂದಾಪುರ: ಸೌದಿ ಅರಸನ ವಿರುದ್ದ ಅವಹೇಳನಕಾರಿ ಪೋಸ್ಟ್ವೊಂದನ್ನು ಶೇರ್ ಮಾಡಿದ ಆರೋಪದ ಮೇಲೆ ಇಲ್ಲಿನ ಕೋಟೇಶ್ವರ ಮೂಲದ ಯುವಕನೋರ್ವನನ್ನು ಸೌದಿ ಪೊಲೀಸರು ವಿಚಾರಣೆಗೆ ಕರೆದೊಯ್ದ ಘಟನೆ ಸೌದಿಅರೇಬಿಯಾದಲ್ಲಿ ನಡೆದಿದೆ.
ಇಲ್ಲಿನ ಕೋಟೇಶ್ವರ ಸಮೀಪದ ಬೀಜಾಡಿ ನಿವಾಸಿ ಹರೀಶ್ ಬಂಗೇರ ಅವರನ್ನು ಸೌದಿ ಪೊಲೀಸರು ವಿಚಾರಣೆಗಾಗಿ ಕರೆದೊಯ್ದಿದ್ದಾರೆ.
ಸೌದಿಅರೇಬಿಯಾದ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಹರೀಶ್ ಬಂಗೇರ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಹತ್ಯೆಯನ್ನು ಹರೀಶ್ ಬಂಗೇರ ಎಸ್ ಎನ್ನುವ ತಮ್ಮ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಕೂಡಲೇ ಅಲ್ಲಿನ ಯುವಕರು ಹರೀಶ್ ಕೆಲಸ ನಿರ್ವಹಿಸುತ್ತಿರುವ ಕಚೇರಿಗೆ ತೆರಳಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ಅದಾದ ಬಳಿಕ ಘಟನೆಯ ಬಗ್ಗೆ ಹರೀಶ್ ಕ್ಷಮೆ ಕೇಳಿ ವೀಡಿಯೊವೊಂದನ್ನು ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾತಾಣದಲ್ಲಿ ಸಾಕಷ್ಟು ವೈರಲ್ ಕೂಡ ಆಗಿತ್ತು.
ನಕಲಿ ಖಾತೆ ಸೃಷ್ಠಿ: ಆರೋಪ
ಇದೀಗ ಕಿಡಿಗೇಡಿಗಳು ಹರೀಶ್ ಬಂಗೇರ ಅವರ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಠಿಸಿ ಆ ಖಾತೆಯಲ್ಲಿ ಹಿಂದೂತ್ವದ ಬಗೆಗಿನ ಬರಹಗಳು ಹಾಗೂ ಸೌದಿ ಅರಸ ಮತ್ತು ಮಕ್ಕಾದ ವಿರುದ್ದ ಅವಹೇಳನಕಾರಿ ಪೋಸ್ಟ್ಗಳನ್ನು ಅಪ್ಲೋಡ್ ಮಾಡಿ ಹರಿಯಬಿಟ್ಟಿದ್ದಾರೆ ಎಂದು ಹರೀಶ್ ಸ್ನೇಹ ವಲಯ ಆರೋಪಿಸಿದೆ. ಸೌದಿ ಅರಸನನ್ನು ನಿಂಧಿಸಿದ ಆರೋಪದ ಮೇಲೆ ಇದೀಗ ಹರೀಶ್ ಬಂಗೇರ ಅವರನ್ನು ಸೌದಿ ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ. ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.