ಅಜಯ್ ದೇವಗನ್ v/s ಕಿಚ್ಚ ಸುದೀಪ್ ಭಾಷಾ ಯುದ್ದ: ಭಾಷಾ ವಿಭಜನೆ ಬೇಡ ಎಂದ ಸೋನು ನಿಗಮ್

ಹೊಸದಿಲ್ಲಿ: ರಾಷ್ಟ್ರ ಭಾಷೆಯಾಗಿ ಹಿಂದಿ ವಿವಾದದ ನಡುವೆಯೇ ಈ ವಿಷಯದ ಬಗ್ಗೆ ಗಾಯಕ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೋನು ನಿಗಮ್‌ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಬೀಸ್ಟ್ ಸ್ಟೂಡಿಯೋಸ್ ನ ಸ್ಥಾಪಕ ಮತ್ತು ಸಿಇಒ ಸುಶಾಂತ್ ಮೆಹ್ತಾ ಅವರೊಂದಿಗಿನ ಸಂವಾದದ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಲು ಕೇಳಿದಾಗ, ಗಾಯಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಸೋನು ನಿಗಮ್, “ನನ್ನ ಜ್ಞಾನದ ಪ್ರಕಾರ, ಭಾರತದ ಸಂವಿಧಾನದಲ್ಲಿ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಬರೆಯಲಾಗಿಲ್ಲ, ನಾನು ಈ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಿದ್ದೇನೆ. ಹಿಂದಿ ದೇಶದಲ್ಲಿ ಹೆಚ್ಚು ಮಾತನಾಡುವ ಭಾಷೆಯಾಗಿದೆ, ನಾನದನ್ನು ಅರ್ಥಮಾಡಿಕೊಂಡಿದ್ದೇನೆ. ಇಷ್ಟು ಹೇಳಿದ ಮೇಲೆಯೂ ತಮಿಳು ಪ್ರಪಂಚದ ಅತ್ಯಂತ ಹಳೆಯ ಭಾಷೆ ಎಂದು ನಮಗೆ ತಿಳಿದಿದೆಯೇ? ಸಂಸ್ಕೃತ ಮತ್ತು ತಮಿಳು ನಡುವೆ ಚರ್ಚೆ ನಡೆಯುತ್ತಿದೆ. ಇಡೀ ಪ್ರಪಂಚದಲ್ಲಿ ತಮಿಳು ಅತ್ಯಂತ ಹಳೆಯ ಭಾಷೆ ಎಂದು ಜನರು ಹೇಳುತ್ತಾರೆ” ಎಂದರು.

“ದೇಶದಲ್ಲಿ ಕಡಿಮೆ ಸಮಸ್ಯೆಗಳಿವೆಯೆ? ಹೊಸದು ಬೇಕೆನ್ನಲು. ನೀವು ತಮಿಳಿಗರು, ನೀವು ಹಿಂದಿಯಲ್ಲಿ ಮಾತನಾಡಬೇಕು ಎಂದು ಇತರರ ಮೇಲೆ ಭಾಷೆಯನ್ನು ಹೇರುವ ಮೂಲಕ ನಾವು ದೇಶದಲ್ಲಿ ಅಸಂಗತತೆಯನ್ನು ಸೃಷ್ಟಿಸುತ್ತಿದ್ದೇವೆ. ಅವರು ಏಕೆ ಮಾತಾಡಬೇಕು? ಜನರು ತಾವು ಮಾತನಾಡುವ ಭಾಷೆಯನ್ನು ನಿರ್ಧರಿಸುವ ಹಕ್ಕನ್ನು ಹೊಂದಿರಬೇಕು” ಎಂದು ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

“ಚೋಡೋ ಯಾರ್, ಅವರು ತಣ್ಣಗಿರಲಿ. ಪಂಜಾಬಿ ಪಂಜಾಬಿ ಮಾತನಾಡಬೇಕು, ತಮಿಳಿಗ ತಮಿಳು ಮಾತನಾಡಬೇಕು. ಇಂಗ್ಲೀಷಿನಲ್ಲಿ ಆರಾಮವಾಗಿದ್ದವರು ಆ ಭಾಷೆಯಲ್ಲಿ ಮಾತನಾಡುತ್ತಾರೆ. ನಮ್ಮ ನ್ಯಾಯಾಲಯಗಳಲ್ಲಿಯೂ ತೀರ್ಪುಗಳು ಇಂಗ್ಲಿಷ್‌ನಲ್ಲಿವೆ. ಫ್ಲೈಟ್ ಅಟೆಂಡೆಂಟ್‌ಗಳು ಸಹ ಆ ಭಾಷೆಗೆ ಆದ್ಯತೆ ನೀಡುತ್ತಾರೆ, ”ಎಂದು ಅವರು ಹೇಳಿದರು.