ಕೋವಿಡ್-19 ಸಂಬಂಧಿತ ಆರೋಗ್ಯ ಸಮಸ್ಯೆ: ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ನವದೆಹಲಿ: ಭಾನುವಾರ, ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಕೋವಿಡ್-19 ಸಂಬಂಧಿತ ಸಮಸ್ಯೆಗಳಿಗಾಗಿ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ. ಸೋನಿಯಾ ಗಾಂಧಿ ಈ ತಿಂಗಳ ಆರಂಭದಲ್ಲಿ ಕೋವಿಡ್ ಸೋಂಕಿನ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಕಂಡುಬಂದಿದ್ದರು.

ಸೋನಿಯಾ ಗಾಂಧಿಗೆ ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು ಜೂನ್ 23 ರಂದು ಹೊಸ ದಿನಾಂಕವನ್ನು ನೀಡಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅವರ ಹೇಳಿಕೆಯನ್ನು ದಾಖಲಿಸಲು ಅವರಿಗೆ ಸಮನ್ಸ್ ಜಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಜೂನ್ 8 ರಂದು ಇಡಿ ಮುಂದೆ ಹಾಜರಾಗಲು ಸಮನ್ಸ್ ಜಾರಿಯಾಗಿತ್ತು. ಆದರೆ ಅದೇ ವೇಳೆಗೆ ಸೋನಿಯಾ ಗಾಂಧಿ ಕೋವಿಡ್ ಪಾಸಿಟಿವ್ ಆಗಿದ್ದರಿಂದ ಇಡಿ ಮುಂದೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಇದೀಗ ಇಡಿ ಜೂನ್ 23 ತನಿಖೆಗೆ ಹಾಜರಾಗುವಂತೆ ಮರು ಸಮನ್ಸ್ ನೀಡಿದೆ.

ಸಮನ್ಸ್‌ಗಳನ್ನು ಕೆಲವೇ ದಿನಗಳ ಹಿಂದೆ ಸ್ವೀಕರಿಸಲಾಗಿದೆ ಮತ್ತು ಸೋನಿಯಾ 100 ಪ್ರತಿಶತ ಇಡಿ ಮುಂದೆ ಹಾಜರಾಗುತ್ತಾರೆ ಎಂದು ಕಾಂಗ್ರೆಸ್ ಹೇಳಿದೆ. ರಾಹುಲ್ ಗಾಂಧಿ ಇಲ್ಲಿದ್ದರೆ ಅವರೂ ಹೋಗುತ್ತಾರೆ. ಇಲ್ಲದಿದ್ದರೆ, ನಾವು ಸ್ವಲ್ಪ ಸಮಯ ಕೇಳುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.