ಕಾರಿನಲ್ಲಿ ಕರೆತಂದು ತಾಯಿಯನ್ನು ರಸ್ತೆಯಲ್ಲೇ ಬಿಟ್ಟು ತೆರಳಿದ ಮಗ

ಉಡುಪಿ: ಹೆತ್ತ ತಾಯಿಯನ್ನು ಮಗ ಕಾರಿನಲ್ಲಿ ಕರೆತಂದು ರಸ್ತೆಯಲ್ಲೇ ಬಿಟ್ಟು ತೆರಳಿದ ಅಮಾನವೀಯ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.ಬ್ರಹ್ಮಾವರದ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಬಳಿ 70 ವರ್ಷದ ವೃದ್ಧೆಯೊಬ್ಬರು ದಿಕ್ಕು ತೋಚದೆ ಚಡಪಡಿಸುತ್ತಿರುವುದನ್ನು ಶಾಲಾ ಬಸ್ ಚಾಲಕ ರಾಮನಾಥ್ ಶೆಣೈ ಗಮನಿಸಿದರು.

ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು.ತಕ್ಷಣ ಸ್ಥಳಕ್ಕೆ ಸ್ಪಂದಿಸಿದ ನಿತ್ಯಾನಂದ ಒಳಕಾಡು ಅವರು 112 ತುರ್ತು ಪೊಲೀಸ್ ಸಹಾಯವಾಣಿ ಸಿಬ್ಬಂದಿಯ ನೆರವಿನಿಂದ ವೃದ್ಧೆಯನ್ನು ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು.

ದಾಖಲು ಪ್ರಕ್ರಿಯೆ ವೇಳೆ ವೃದ್ಧೆ ತನ್ನ ಹೆಸರು ಸರಸ್ವತಿ (70) ಎಂದು ಹಾಗೂ ತಮಿಳುನಾಡಿನ ತಿರುವಳ್ಳುವೂರು ನಿವಾಸಿ ಎಂದು ತಿಳಿಸಿದ್ದಾರೆ. ತನ್ನ ಮಗ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿದ್ದಾನೆ ಎಂದು ಅವರು ಹೇಳಿದ್ದಾರೆ.

ಘಟನೆಯ ಕುರಿತು ನಿತ್ಯಾನಂದ ಒಳಕಾಡು ಅವರು ಮಹಿಳಾ ಪೊಲೀಸ್ ಠಾಣೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿಗೆ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ.

ವೃದ್ಧೆಯ ಕುಟುಂಬದವರ ಪತ್ತೆ ಹಾಗೂ ಮುಂದಿನ ಕ್ರಮದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ.