ರೈಲ್ವೇ ಟ್ರ್ಯಾಕ್ ಮೇಲೆ ಸೌರಫಲಕ: ಭಾರತೀಯ ರೈಲ್ವೇ ಹೊಸ ಹೆಜ್ಜೆ

ವಾರಾಣಸಿ: ಉತ್ತರಪ್ರದೇಶದ ವಾರಾಣಸಿಯಲ್ಲಿರುವ ಬನಾರಸ್‌ ಲೋಕೋಮೋಟಿವ್ ವರ್ಕ್ಸ್ (ಬಿಎಲ್‌ಡಬ್ಲ್ಯೂ) ತನ್ನ ಕಾರ್ಯವ್ಯಾಪ್ತಿಯ ರೈಲ್ವೆ ಹಳಿಗಳ ಕಂಬಿಗಳ ನಡುವೆ ಸೌರ ಫಲಕಗಳನ್ನು ಅಳವಡಿಸುವ ದೇಶದ ಮೊದಲ ಪ್ರಯತ್ನಕ್ಕೆ ಕೈ ಹಾಕಿದೆ.

ಬಿಎಲ್‌ಡಬ್ಲ್ಯೂನ ವರ್ಕ್‌ಶಾಪ್‌ನ ಸುಮಾರು 70 ಮೀ. ಉದ್ದಕ್ಕೆ ಫಲಕಗಳನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದು, ಸ್ವಾತಂತ್ರೋತ್ಸವದ ದಿನ ಉದ್ಘಾಟಿಸಲಾಗಿದೆ. ಅಗತ್ಯ ಬಿದ್ದಾಗ ಬಿಚ್ಚಿ ಮತ್ತೆ ಜೋಡಿಸಬಹುದಾದ ಒಟ್ಟು 28 ಫಲಕಗಳು 15 ಕೆಡಬ್ಲ್ಯೂಪಿ ಸಾಮರ್ಥ್ಯ ಹೊಂದಿದ್ದು, ಪ್ರತಿ ಕಿ.ಮೀ.ಗೆ ದಿನವೊಂದಕ್ಕೆ 880 ಯುನಿಟ್ ವಿದ್ಯುಚ್ಛಕ್ತಿ ಉತ್ಪಾದಿಸಬಹುದಾಗಿದೆ.

ಭೂಸ್ವಾಧೀನದ ಅಗತ್ಯವಿಲ್ಲದೆ, ಅನುಪಯುಕ್ತ ಪ್ರದೇಶದಲ್ಲಿ ವಿದ್ಯುತ್ ಉತ್ಪಾದಿಸಬಲ್ಲ ಈ ಕ್ರಮವನ್ನು ಇನ್ನಷ್ಟು ವಿಸ್ತರಿಸಲು ಭಾರತೀಯ ರೈಲ್ವೆಯು ಮುಂದಾಗಬಹುದು ಎನ್ನಲಾಗಿದೆ. ಏತನ್ಮಧ್ಯೆ, ಹಸಿರು ಇಂಧನ, ಸುಸ್ಥಿರತೆ ಸಾಧಿಸಲು ಈ ಉಪಕ್ರಮದ ಮೂಲಕ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.