ಮುದ್ರಾಡಿ : ಭೂಮಿಗೆ ಬಂದ ಮೇಲೆ ನಾವು ಸಮಾಜ ಸೇವೆ ಮಾಡುವುದು ನಮ್ಮ ಕರ್ತವ್ಯ ಅಲ್ಲ, ಅದು ನಮ್ಮ ಜವಾಬ್ಧಾರಿ. ನಿರಂತರವಾಗಿ ಸಮಾಜಮುಖಿ ಕೆಲಸವನ್ನು ಮಾಡುತ್ತ ಬಂದಿದ್ದೇನೆ, ನನ್ನ ಕೆಲಸವೇ ಈಗ ಪ್ರಚಾರಕ್ಕೆ ಬಂದಿದೆ. ಸೇವೆಗಾಗಿ ನೀಡಿದ ದೊಡ್ಡ ಗೌರವ ಅತ್ಯಂತ ಖುಷಿ ನೀಡಿದೆ, ಜವಾಬ್ಧಾರಿಯು ಹೆಚ್ಚಿದೆ, ಸೇವೆಯನ್ನು ಇನ್ನಷ್ಟು ಮುಂದುವರಿಸುತ್ತೇನೆ ಎಂದು ಸಮಾಜ ಸೇವಕ, ಕರ್ನಾಟಕ ರಾಜ್ಯ ಗಣಿ ಮತ್ತು ಕಲ್ಲು ಕ್ರಷರ್ ಮಾಲಕರ ಸಂಘ ರಾಜ್ಯ ಘಟಕದ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು.
ಅವರು ಮುದ್ರಾಡಿ ಅಭಯಹಸ್ತೆ ಆದಿಶಕ್ತಿ ಕ್ಷೇತ್ರ ಹಾಗೂ ನಂದೀಕೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದ ಕ್ಷೇತ್ರದ ಸಂಸ್ಥಾಪಕ ಧರ್ಮಯೋಗಿ ಮೋಹನ ಸ್ವಾಮೀಜಿಯವರ ಪ್ರಥಮ ವರ್ಷದ ಆರಾಧನಾ ಮಹೋತ್ಸವದಲ್ಲಿ ಧಾರ್ಮಿಕ ಕ್ಷೇತ್ರ ಮತ್ತು ನಾಡಿಗೆ ಸಲ್ಲಿಸಿದ ವಿಶೇಷ ಸೇವೆಗಾಗಿ ” ಧರ್ಮಯೋಗಿ ಸಮ್ಮಾನ” ಸ್ವೀಕರಿಸಿ ಮಾತನಾಡಿದರು.
ಚಿಕ್ಕಮಗಳೂರು ಕೆ.ಎಸ್.ನಿತ್ಯಾನಂದ ಸ್ವಾಮೀಜಿ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮುದ್ರಾಡಿ ಅಭಯಹಸ್ತೆ ಆದಿಶಕ್ತಿ ಕ್ಷೇತ್ರ ಹಾಗೂ ನಂದೀಕೇಶ್ವರ ದೇವಸ್ಥಾನದಲ್ಲಿ ಕ್ಷೇತ್ರದ ಸಂಸ್ಥಾಪಕ ಧರ್ಮಯೋಗಿ ಮೋಹನ ಸ್ವಾಮೀಜಿಯವರ ಪ್ರಥಮ ವರ್ಷದ ಆರಾಧನಾ ಮಹೋತ್ಸವ ನಡೆಯಿತು.
ಮುಂಬಯಿಯ ಸುಂದರ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹೆಗ್ಡೆ, ವಾಸ್ತುತಜ್ಞ ಪ್ರಮಲ್ ಕುಮಾರ್ ಕಾರ್ಕಳ, ಭಾಗವತ ಪಟ್ಲ ಸತೀಶ ಶೆಟ್ಟಿ, ಯಕ್ಷಗಾನ ಕಲಾವಿದ ಉಜಿರೆ ಅಶೋಕ್ಭಟ್, ಸೀತಾನದಿ ಸೌಖ್ಯ ಯೋಗ ಟ್ರಸ್ಟ್ ಅಧ್ಯಕ್ಷ ವಿಠ್ಠಲ ಶೆಟ್ಟಿ, ರಂಗ ನಿರ್ದೇಶಕ ಬೆಂಗಳೂರಿನ ಜಗದೀಶ್ ಜಾಲ, ಮುದ್ರಾಡಿ ಆದಿಶಕ್ತಿ ಕ್ಷೇತ್ರದ ಧರ್ಮಾಧಿಕಾರಿ ಸುಕುಮಾರ್ ಮೋಹನ್, ಕಮಲ ಮೋಹನ್, ಸುದೀಂದ್ರ ಮೋಹನ್, ಸುರೇಂದ್ರ ಮೋಹನ್, ಉಮೇಶ್ ಕಲ್ಮಾಡಿ, ವಾಣಿ ಸುಕುಮಾರ್, ಸುಗಂಧಿ ಉಮೇಶ್ ಕಲ್ಮಾಡಿ ಮುಂತಾದವರು ಉಪಸ್ಥಿತರಿದ್ದರು.