ಬಂಟ್ವಾಳ: ತಾಲೂಕಿನ ವಗ್ಗದಲ್ಲಿರುವ ಸಾಲುಮರ ತಿಮ್ಮಕ್ಕ ಉದ್ಯಾನವನದ ಸಮೀಪದ ಕಾವಳಪಡೂರು ಗ್ರಾಪಂ ಉಪಾಧ್ಯಕ್ಷೆ ವಸಂತಿಯವರ ಮನೆ ಬಳಿ ಇದ್ದ ಬಿಲವೊಂದರಲ್ಲಿ ಸಿಲುಕಿ ಹೊರ ಬರಲು ಹೆಣಗಾಡುತ್ತಿದ್ದ ನಾಗರಹಾವನ್ನು ಮೂರು ದಿನಗಳಿಂದ ಗಮನಿಸುತ್ತಿದ್ದ ಮನೆಯವರು ಜೂನ್ 6ರಂದು ವಗ್ಗದ ಉರಗತಜ್ಞ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿ ಮನೆಗೆ ಕರೆಸಿಕೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಕಿರಣ್ ಹಾವನ್ನು ಬಿಲದಿಂದ ಮೆಲ್ಲಗೆ ಹೊರ ತೆಗೆದು ರಕ್ಷಿಸಿದ್ದಾರೆ. ಆದರೆ ಅದರ ತಲೆಯ ಕೆಳಭಾಗದಲ್ಲಿ ಎರಡು ಗಾಯಗಳಾಗಿದ್ದರಿಂದ ಚಿಕಿತ್ಸೆಗಾಗಿ ಮಂಗಳೂರಿನ ಪಶುವೈದ್ಯ ಡಾ.ಯಶಸ್ವಿ ನಾರಾವಿ ಅವರಲ್ಲಿಗೆ ಕೊಂಡುಹೋಗಿದ್ದಾರೆ.
ಗಾಯಕ್ಕೆ ಚಿಕಿತ್ಸೆ ಒದಗಿಸಿದ ವೈದ್ಯರು ಹಾವಿನ ಹೊಟ್ಟೆ ಉಬ್ಬೇರಿದ್ದು ಗಮನಿಸಿ ಎಕ್ಸ್ ರೇ ಮಾಡಿದ್ದಾರೆ. ಆಗ ಅದರ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ನ ಸಣ್ಣ ಡಬ್ಬದಂತಹ ವಸ್ತುವಿರುವುದು ಗಮನಕ್ಕೆ ಬಂದಿದೆ. ಹಾವಿಗೆ ಶಸ್ತ್ರಚಿಕಿತ್ಸೆ ನಡೆಸಿದಾಗ ಹೊಟ್ಟೆಯೊಳಗೆ ಸುಣ್ಣದ ಪ್ಲಾಸ್ಟಿಕ್ ಡಬ್ಬ ಇರುವುದು ಗೊತ್ತಾಗಿದೆ. ಇದನ್ನು ಯಶಸ್ವಿಯಾಗಿ ಹೊರತೆಗೆದು ಹಾವಿಗೆ ಜೀವದಾನ ಮಾಡಿದ್ದಾರೆ.
ಸುಮಾರು ಐದು ಅಡಿ ಉದ್ದದ ಸಾಕಷ್ಟು ದಪ್ಪವಿದ್ದ ಹೆಣ್ಣು ನಾಗರಹಾವು ಇದಾಗಿದ್ದು, 10ವರ್ಷ ಪ್ರಾಯವಾಗಿರಬಹುದು. ಹಾವು ಮೊಟ್ಟೆ ನುಂಗುವ ವೇಳೆ ಸುಣ್ಣದ ಡಬ್ಬವನ್ನು ಅಚಾನಕ್ ಆಗಿ ಒಟ್ಟಿಗೆ ನುಂಗಿದ್ದಿರಬಹುದು ಎಂದು ಡಾ.ಯಶಸ್ವಿ ಶಂಕೆ ವ್ಯಕ್ತಪಡಿಸಿದ್ದಾರೆ.
ಶಸ್ತ್ರಚಿಕಿತ್ಸೆಯ ಬಳಿಕ 15 ದಿನಗಳ ಕಾಲ ಶುಶ್ರೂಷೆ ಒದಗಿಸಿ ಯಾವುದೇ ತೊಂದರೆ ಇಲ್ಲವೆಂದು ಕಂಡ ಬಳಿಕ ನಾಗರಹಾವನ್ನು ಅರಣ್ಯ ಇಲಾಖೆಯ ಮಾರ್ಗದರ್ಶನದಂತೆ ಸ್ನೇಕ್ ಕಿರಣ್ ರಕ್ಷಿತಾರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಮಾನವೀಯತೆ ತೋರಿಸಿ ಸರಿಯಾದ ಸಮಯದಲ್ಲಿ ಸಮಯಪ್ರಜ್ಞೆ ಮೆರೆದಿರುವುದರಿಂದ ಹಾವಿಗೆ ಪುನರ್ಜನ್ಮ ದೊರಕಿದೆ.