ಚಿಕ್ಕಮಗಳೂರು: ಇಲ್ಲಿನ ಹಾವು ಹಿಡಿಯುವ ಸ್ನೇಕ್ ನರೇಶ್ ಎಂಬ ವ್ಯಕ್ತಿಯು ತಾವೇ ಹಿಡಿದ ನಾಗರಹಾವು ಕಚ್ಚಿ ಮಂಗಳವಾರ ಮೃತಪಟ್ಟಿದ್ದಾರೆ.
ನರೇಶ್ (55) ಕೆಲವು ದಿನಗಳ ಹಿಂದೆ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿ ಬೆಳಗ್ಗೆ ನಾಗರಹಾವು ಹಿಡಿದು ರಕ್ಷಣೆ ಮಾಡಿ ಸ್ಕೂಟಿಯಲ್ಲಿ ಇಟ್ಟು ಮತ್ತೊಂದು ಹಾವಿದೆ ಎಂದು ಹಿಡಿಯಲು ಹೊರಟ್ಟಿದ್ದರು. ಈ ವೇಳೆ ಸ್ಕೂಟಿಯ ಸೀಟ್ ತೆಗೆದು ಹಾವಿದ್ದ ಚೀಲ ಸರಿಪಡಿಸಲು ಮುಂದಾದಾಗ ನಾಗರಹಾವು ನರೇಶ್ ಅವರ ಕೈಗೆ ಕಚ್ಚಿದೆ. ಹಾವು ಕಚ್ಚಿದ ತಕ್ಷಣವೇ ಸ್ಥಳೀಯರು ನರೇಶ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಹಲವು ದಿನಗಳು ಆಸ್ಪತ್ರೆಯಲ್ಲಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ನರೇಶ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ನರೇಶ್ ಕಳೆದ 25 ವರ್ಷಗಳಿಂದ ಚಿಕ್ಕಮಗಳೂರು ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿ ಹಾವು ಹಿಡಿಯುತ್ತಿದ್ದರು. ನೂರಾರು ಹಾವುಗಳನ್ನು ರಕ್ಷಿಸಿ, ಹಾವುಗಳ ಕುರಿತು ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ.
ಮೂಲತಃ ವೃತ್ತಿಯಲ್ಲಿ ಟೈಲರ್ ಆಗಿ ಜೀವನ ನಡೆಸುತ್ತಿದ್ದ ಸ್ನೇಕ್ ನರೇಶ್, ಪ್ರವೃತ್ತಿಯಲ್ಲಿ ಹಾವು ಹಿಡಿಯುವುದನ್ನು ರೂಢಿಸಿಕೊಂಡಿದ್ದರು ಮತ್ತು ಚಿಕ್ಕಮಗಳೂರು ಪರಿಸರದಲ್ಲಿ ಹಾವಿನ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದರು.