ನವದೆಹಲಿ: ಯುಪಿಐ ವಹಿವಾಟಿನ ಮೊತ್ತ ಆಧರಿಸಿ ಕರ್ನಾಟಕದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು, ಸಾವಿರಾರು ಸಣ್ಣ ವರ್ತಕರಿಗೆ ಜಿಎಸ್ಟಿ ನೋಟಿಸ್ ಜಾರಿ ಮಾಡಿರುವ ಹೊತ್ತಿನಲ್ಲೇ, ಇಂಥ ತೀವ್ರತರ ನಿಷ್ಕರ್ಷಾ ಕ್ರಮವು ಆರ್ಥಿಕತೆಯು ಮತ್ತೆ ನಗದು ವಹಿವಾಟಿಗೆ ಮುಖಮಾಡಲು ಕಾರಣವಾಗಬಹುದು ಎಂದು ‘ಎಸ್‌ಬಿಐ ರಿಸರ್ಚ್’ ತನ್ನ ವರದಿಯಲ್ಲಿ ಎಚ್ಚರಿಸಿದೆ.
ಜಿಎಸ್ಟಿ ನೋಟಿಸ್ ವಿರೋಧಿಸಿ ಕರ್ನಾಟಕದಲ್ಲಿ ಸಣ್ಣ ವ್ಯಾಪಾರಿಗಳು ಯುಪಿಐ ಮೂಲಕ ಹಣ ಸ್ವೀಕರಿಸಲು ನಿರಾಕರಿಸುತ್ತಿರುವ ಹೊತ್ತಿನಲ್ಲೇ ‘ಎಸ್‌ಬಿಐ ರಿಸರ್ಚ್’ ವರದಿಯೊಂದನ್ನು ಬಿಡುಗಡೆ ಮಾಡಿದೆ. ವರದಿಯಲ್ಲಿ ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನಿಯಮಗಳ ಜಾರಿ ವೇಳೆ ಸಮತೋಲನದ ಅಗತ್ಯವಿದೆ. ಜಿಎಸ್‌ಟಿ ಜಾರಿಯನ್ನು ಸೂಕ್ಷ್ಮತೆಯೊಂದಿಗೆ ಸಮತೋಲನಗೊಳಿಸಬೇಕು. ಇಲ್ಲದಿದ್ದರೆ, ಸಣ್ಣ ವ್ಯಾಪಾರಿಗಳು ಮತ್ತೆ ನಗದು ಆಧರಿತ ಆರ್ಥಿಕತೆಗೆ ಹಿಂತಿರುಗುವ ಆತಂಕವಿದೆ’ ಎಂದು ಎಚ್ಚರಿಸಿದೆ.
ಜೊತೆಗೆ ಪರೋಕ್ಷ ತೆರಿಗೆ ವ್ಯವಸ್ಥೆಯು ಹೆಚ್ಚಿನ ಹೊಣೆಗಾರಿಕೆ ಮತ್ತು ಆದಾಯ ಉತ್ಪಾದನೆಗೆ ಅಡಿಪಾಯ ಹಾಕಿರುವ ಹೊತ್ತಿನಲ್ಲಿ, ಸಣ್ಣ ವರ್ತಕರನ್ನು ಸಬಲೀಕರಣಗೊಳಿಸಿದರೆ ಮಾತ್ರ ಇದು ದೀರ್ಘಾವಧಿಯಲ್ಲಿ ಯಶಸ್ವಿಯಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.












