ಮಹಿಳೆಯರ ಆರ್ಥಿಕ ಸಬಲೀಕರಣವು ಕುಟುಂಬದ ಅಭಿವೃದ್ಧಿಯಷ್ಟೇ ಅಲ್ಲದೆ, ಸಮಾಜದ ಪ್ರಗತಿಗೂ ಪ್ರಮುಖ ಆಧಾರವಾಗಿದೆ. ಮಹಿಳೆಯರಲ್ಲಿರುವ ಕೌಶಲ್ಯಕ್ಕೆ ಸೂಕ್ತ ವೇದಿಕೆ ಹಾಗೂ ಮಾರುಕಟ್ಟೆ ದೊರೆತಾಗ ಅದು ಸ್ವಾವಲಂಬನೆ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಆಳ್ವಾಸ್ ಮೆಡಿಕಲ್ ಕಾಲೇಜಿನ ಡೀನ್ ಡಾ. ಮಹಾಬಲೇಶ್ ಶೆಟ್ಟಿ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹಿಳಾ ವೇದಿಕೆ ‘ಸಕ್ಷಮಾ’ ಹಾಗೂ ಆಳ್ವಾಸ್ ಹೋಮಿಯೋಪಥಿ ಕಾಲೇಜಿನ ಸಹಯೋಗದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಆಸಕ್ತ ಗೃಹಿಣಿಯರು, ಹೊಲಿಗೆ ವೃತ್ತಿಯಲ್ಲಿ ತೊಡಗಿಸಿಕೊಂಡವರು ಹಾಗೂ ಹವ್ಯಾಸಿ ಕಸೂತಿ ಕಲಾವಿದೆಯರಿಗಾಗಿ ಆಯೋಜಿಸಿರುವ ‘ಆರಿ ಲಹರಿ’ 15 ದಿನಗಳ ಉಚಿತ ಆರಿ ಕಸೂತಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಇಂತಹ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಮಹತ್ವದ ಕೊಡುಗೆ ನೀಡುತ್ತವೆ. ಮಹಿಳೆಯರು ತಮ್ಮಲ್ಲಿರುವ ಕೌಶಲ್ಯವನ್ನು ಗುರುತಿಸಿ, ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಆರ್ಥಿಕ ಶಕ್ತಿಯಾಗಿ ಪರಿವರ್ತಿಸಿಕೊಳ್ಳಬೇಕು. ಕೌಶಲ್ಯವು ಕೇವಲ ವೈಯಕ್ತಿಕ ಆಸಕ್ತಿಯಾಗಿ ಉಳಿಯದೆ, ಆದಾಯದ ಮೂಲವಾಗಬೇಕು ಎಂದು ಸಲಹೆ ನೀಡಿದರು.
ಮಹಿಳಾ ಸಬಲೀಕರಣದ ಕುರಿತು ಇಂದು ವ್ಯಾಪಕವಾಗಿ ಚರ್ಚಿಸಲಾಗುತ್ತಿದ್ದರೂ, ಸ್ವಾಮಿ ವಿವೇಕಾನಂದರು ಬಹಳ ಹಿಂದೆಯೇ ಮಹಿಳೆಯರ ಶಕ್ತಿ, ಸಾಮರ್ಥ್ಯ ಹಾಗೂ ಗೌರವದ ಮಹತ್ವವನ್ನು ಪ್ರತಿಪಾದಿಸಿದ್ದರು. ಮಹಿಳೆಯನ್ನು ಗೌರವಿಸುವ ಸಮಾಜವೇ ಪ್ರಗತಿ ಹೊಂದಲು ಸಾಧ್ಯ ಎಂಬ ಅವರ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ ಎಂದರು.
ಕಸೂತಿ ಕಲೆ ಸ್ವಾವಲಂಬನೆಯ ದಾರಿ ಕಾರ್ಯಕ್ರಮದ ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದ ಎಸ್ಡಿಎಂ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕಿ ಸೋನಿಯಾ ಯಶೋವರ್ಮ, ಕಸೂತಿ ಕಲೆ ಭಾರತೀಯ ಪರಂಪರೆಯ ಪ್ರಮುಖ ಭಾಗವಾಗಿದ್ದು, ಇಂದಿಗೂ ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂದರು. ಕಸೂತಿ ಕಲೆಯನ್ನು ಕಲಿಯುವುದರಿಂದ ಮಹಿಳೆಯರಲ್ಲಿ ಕೌಶಲ್ಯದ ಜೊತೆಗೆ ಆತ್ಮವಿಶ್ವಾಸವೂ ವೃದ್ಧಿಯಾಗುತ್ತದೆ. ಕೈಯಲ್ಲಿರುವ ಸೂಜಿ ಮತ್ತು ದಾರ ಕೇವಲ ಕರಕುಶಲದ ಸಾಧನಗಳಲ್ಲ, ಅವುಗಳನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸಿಕೊಳ್ಳುವ ಸಾಮರ್ಥ್ಯವೂ ಮಹಿಳೆಯರಲ್ಲಿದೆ. ಕೌಶಲ್ಯವನ್ನು ಉದ್ಯಮಶೀಲತೆಯೊಂದಿಗೆ ಜೋಡಿಸಿದಾಗ ಸ್ವಂತ ಆದಾಯದ ಮೂಲವನ್ನು ಸೃಷ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇಂದಿನ ಕಾಲದಲ್ಲಿ ಕೌಶಲ್ಯಕ್ಕೆ ಹೆಚ್ಚಿನ ಬೇಡಿಕೆಯಿದೆ. ಆದರೆ ಕೌಶಲ್ಯವನ್ನು ಆರ್ಥಿಕ ಮೌಲ್ಯವಾಗಿ ಪರಿವರ್ತಿಸಿದಾಗ ಮಾತ್ರ ಅದರ ಸಂಪೂರ್ಣ ಪ್ರಯೋಜನ ದೊರೆಯುತ್ತದೆ. ಹೊಸ ವಿನ್ಯಾಸಗಳು, ಹೊಸ ಆಲೋಚನೆಗಳು ಹಾಗೂ ಗ್ರಾಹಕರ ಬೇಡಿಕೆಗೆ ಅನುಗುಣವಾದ ಉತ್ಪನ್ನಗಳನ್ನು ರೂಪಿಸುವತ್ತ ಗಮನ ಹರಿಸಬೇಕು ಎಂದರು.
ಡಿಜಿಟಲ್ ಯುಗವು ಮಾರುಕಟ್ಟೆಯನ್ನು ಮನೆಯ ಬಾಗಿಲಿಗೆ ತಂದು ನಿಲ್ಲಿಸಿದೆ. ಸಾಮಾಜಿಕ ಜಾಲತಾಣಗಳು ಹಾಗೂ ವಿವಿಧ ಆನ್ಲೈನ್ ವೇದಿಕೆಗಳನ್ನು ಬಳಸಿಕೊಂಡು ಉತ್ಪನ್ನಗಳಿಗೆ ವಿಶಾಲ ಮಾರುಕಟ್ಟೆಯನ್ನು ಕಂಡುಕೊಳ್ಳಬಹುದು. ಧರ್ಮಸ್ಥಳದ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಜ್ಞಾನ ವಿಕಾಸ ಯೋಜನೆಯ ಮೂಲಕ ಹಲವು ಮಹಿಳೆಯರು ಉದ್ಯಮ ಆರಂಭಿಸಿ, ಒಂದು ಕೋಟಿಗೂ ಅಧಿಕ ರೂಪಾಯಿ ವಹಿವಾಟು ನಡೆಸಿರುವುದನ್ನು ಅವರು ಉಲ್ಲೇಖಿಸಿದರು.
ಕೌಶಲ್ಯಾಭಿವೃದ್ಧಿಗೆ ‘ಸಕ್ಷಮಾ’ ವೇದಿಕೆ ಸಕ್ಷಮಾ ವೇದಿಕೆಯ ಸಂಚಾಲಕಿ ಡಾ. ಗ್ರೀಷ್ಮಾ ವಿವೇಕ್ ಆಳ್ವ ಮಾತನಾಡಿ, ‘ಸಕ್ಷಮಾ’ ಮಹಿಳಾ ವೇದಿಕೆಯು ಸಕಾರಾತ್ಮಕ ಚಿಂತನೆಗಳನ್ನು ಪಸರಿಸುವುದರ ಜೊತೆಗೆ ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಕಲಿಯಲು ಉತ್ತಮ ವೇದಿಕೆಯಾಗಿದೆ ಎಂದರು.
‘ಆರಿ ಲಹರಿ’ ಕಾರ್ಯಾಗಾರವು ಮಹಿಳೆಯರಿಗೆ ಹೊಸ ಕೌಶಲ್ಯವನ್ನು ಕಲಿಯಲು ಹಾಗೂ ಕಲಿತ ಕೌಶಲ್ಯವನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲು ಸಹಕಾರಿಯಾಗಲಿದೆ. ಕಲಿತ ವಿದ್ಯೆಯನ್ನು ಸುಂದರವಾಗಿ ಅಳವಡಿಸಿಕೊಳ್ಳುವುದರ ಜೊತೆಗೆ ನಿರಂತರ ಅಭ್ಯಾಸ ಮಾಡಬೇಕು. ಕಲಿಕೆ ತರಗತಿಗೆ ಮಾತ್ರ ಸೀಮಿತವಾಗದೆ, ದಿನನಿತ್ಯದ ಬದುಕಿನಲ್ಲಿ ಬಳಕೆಯಾಗಬೇಕು ಎಂದು ಹೇಳಿದರು. ಮಹಿಳೆಯರು ಪರಸ್ಪರ ಬೆಂಬಲವಾಗಿ ನಿಲ್ಲಬೇಕು. ಹೆಣ್ಣಿಗೆ ಹೆಣ್ಣು ಬೆನ್ನೆಲುಬಾಗಿ ನಿಂತಾಗ ಮಹಿಳಾ ಸಬಲೀಕರಣ ಮತ್ತಷ್ಟು ಪರಿಣಾಮಕಾರಿಯಾಗುತ್ತದೆ ಎಂದರು.
ಕರ್ಯಕ್ರಮದಲ್ಲಿ ಸೋನಿಯಾ ಯಶೋವರ್ಮರವರನ್ನು ಸನ್ಮಾನಿಸಲಾಯಿತು. ವಿವಿಧ ಭಾಗಗಳಿಂದ ಒಟ್ಟು 65 ಮಹಿಳೆಯರು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿ ಶುಭಲಕ್ಷ್ಮೀ ಹಾಗೂ ಆಳ್ವಾಸ್ ಹೋಮಿಯೋಪಥಿ ಕಾಲೇಜಿನ ಆಡಳಿತಾಧಿಕಾರಿ ಡಾ. ಪ್ರಜ್ಞಾ ಆಳ್ವ ಉಪಸ್ಥಿತರಿದ್ದರು. ಅನುಷಾ ಕಾರ್ಯಕ್ರಮ ನಿರೂಪಿಸಿದರು. ಡಾ. ಪ್ರಜ್ಞಾ ಆಳ್ವ ಸ್ವಾಗತಿಸಿದರು. ವಿನಯಾ ಅತಿಥಿಯನ್ನು ಪರಿಚಯಿಸಿದರು. ಭವ್ಯಾ ವಂದಿಸಿದರು.















