ಉಡುಪಿ: ರಾಜ್ಯದ ಯುವಜನತೆಗೆ ಅವರ ಕನಸಿನ ಉದ್ಯೋಗ ಪಡೆಯಲು ಸಹಕಾರಿಯಾಗುವಂತೆ ಎಲ್ಲಾ
ಅಗತ್ಯ ಮಾಹಿತಿ ಹಾಗೂ ನೆರವು ನೀಡುವ ಸ್ಕಿಲ್ ಕನೆಕ್ಟ್ ಪರಿಷ್ಕೃತ ಪೋರ್ಟಲ್ ಅನ್ನು ಜುಲೈ 15 ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ರಾಜ್ಯದ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಅಶ್ವಥ್ ನಾರಾಯಣ ಹೇಳಿದರು.
ಅವರು ಇಂದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಕೌಶಾಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉದ್ಯೋಗ ವಿನಿಮಯ ಕಚೇರಿ ಉಡುಪಿ ಹಾಗೂ ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಡೀ ದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಪ್ರತಿಭಾವಂತ ಯುವಕರು ಕರ್ನಾಟಕದಲ್ಲಿದ್ದಾರೆ. ಆದರೆ ಅವರಿಗೆ ಅವರ ಕನಸಿನ ಉದ್ಯೋಗ ಪಡೆಯಲು ಬೇಕಾದ ಅಗತ್ಯ ಮಾಹಿತಿಯ ಕೊರತೆಯಿದೆ. ಆದ್ದರಿಂದ ಉದ್ಯೋಗಾಕಾಂಕ್ಷಿಗಳು, ಉದ್ಯೋಗದಾತರು, ಕೌಶಲ್ಯಾಭಿವೃದ್ಧಿ ಮಾಹಿತಿಗಳು ಸರಳವಾಗಿ ದೊರೆಯುವಂತಹ ಸ್ಕಿಲ್ ಕನೆಕ್ಟ್ ಪೋರ್ಟ್ಲ್ ಅನ್ನು ಜುಲೈ 15 ರಂದು ಲೋಕಾರ್ಪಣೆ ಮಾಡಲಿದ್ದು, ಈ ಪೋರ್ಟಲ್ನಿಂದ ವರ್ಚುವಲ್ ಮೂಲಕ ಯುವ ಜನತೆಯು ತಮಗೆ ಇಷ್ಟವಾದ ಉದ್ಯೋಗ ಪಡೆಯಲು ಬೇಕಿರುವ ಅರ್ಹತೆ, ಕೌಶಲ್ಯ, ಲಭ್ಯವಿರುವ ಉದ್ಯೋಗಗಳು ಮತ್ತು ಅಂತಹ ಉದ್ಯೋಗ ನೀಡುವ ಸಂಸ್ಥೆಗಳ ಸಂಪೂರ್ಣ
ವಿವರಗಳನ್ನು ಉದ್ಯೋಗಾಕಾಂಕ್ಷಿಗಳು ಇದ್ದಲ್ಲಿಯೇ ಪಡೆಯಬಹುದಾಗಿದೆ.
ರಾಜ್ಯದಿಂದ ಹೊರದೇಶಗಳಿಗೆ ಉದ್ಯೋಗಕ್ಕೆ ತೆರಳುವವರಿಗೆ ಐ.ಎಂ.ಸಿ ಕೇಂದ್ರಗಳ ಮೂಲಕ ಎಲ್ಲಾ ಅಗತ್ಯ ನೆರವು, ಪಾಸ್ಪೋರ್ಟ್ ವ್ಯವಸ್ಥೆ ಹಾಗೂ ಇತರೆ ಸೌಲಭ್ಯಗಳನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಕೌಶಲ್ಯಾಧಾರಿತ ಶಿಕ್ಷಣ ನೀಡಲು 1200 ಐ.ಟಿ.ಐ ಕಾಲೇಜುಗಳಿದ್ದು, 1.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 75,000 ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿ.ಟಿ.ಟಿ.ಸಿ ಕಾಲೇಜುಗಳಿದ್ದು, ತಾಂತ್ರಿಕ ಶಿಕ್ಷಣ ಕಾಲೇಜುಗಳಲ್ಲಿ ಸೀಟುಗಳಿಗೆ ಕೊರತೆಯಾಗಿಲ್ಲ ಎಂದರು.
ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಉದ್ಯೋಗ ಮೇಳದಲ್ಲಿ 2000 ಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಲು ಸಾಧ್ಯವಿದ್ದು, 2800 ಕ್ಕೂ ಹೆಚ್ಚು ಆನ್ಲೈನ್ ಅರ್ಜಿಗಳು ಸ್ವೀಕೃತಗೊಂಡಿವೆ. 57 ಕ್ಕೂ ಅಧಿಕ ಉದ್ಯೋಗದಾತ ಕಂಪನಿಗಳು ಭಾಗವಹಿಸಿದ್ದು, ಕಂಪನಿಗಳು ಉದ್ಯೋಗಮೇಳದಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಶೀಘ್ರವೆ ನೇಮಕ ಆದೇಶ ನೀಡಬೇಕು ಎಂದರು.
ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಪುರಸಭೆ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಶಾಂತಾರಾಮ ಪ್ರಭು, ಭಂಡಾರ್ಕಾರ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಂ ಗೋಂಡಾ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಜಗದೀಶ್ ಸ್ವಾಗತಿಸಿದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಶೆಟ್ಟಿ ವಂದಿಸಿದರು. ಅಕ್ಷಯ್ ಹೆಗಡೆ ನಿರೂಪಿಸಿದರು.