ದ.ಕ: ವಿವಿಧೆಡೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ; ಗೋವಾ ಸಿಎಂ ಪ್ರಮೋದ್ ಸಾವಂತ್ ಧರ್ಮಸ್ಥಳ ಭೇಟಿ

ಬೆಳ್ತಂಗಡಿ: ದ.ಕ. ಜಿಲ್ಲೆಯಾದ್ಯಂತ ಇಂದು (ಮಾ.12) ಬಿಜೆಪಿ ವತಿಯಿಂದ ಹಮ್ಮಿಕೊಂಡ ವಿಜಯ ಸಂಕಲ್ಪ ಯಾತ್ರೆಯ ಪ್ರಯುಕ್ತ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಹಿತ ರಾಜ್ಯದ ಪ್ರಮುಖರು ಬೆಳ್ತಂಗಡಿಗೆ ಆಗಮಿಸಿದ್ದಾರೆ.
ವಿಜಯ ಸಂಕಲ್ಪ ಯಾತ್ರೆಯ ಹಿನ್ನೆಲೆ ಮಂಗಳೂರಿನಿಂದ ಆಗಮಿಸಿ ಬೆಳ್ತಂಗಡಿ ತಾಲೂಕಿನಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರ್ಯಾಲಿ ನಡೆಸುವ ಹಿನ್ನೆಲೆ ಅವರು ಇದೀಗ ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿದ್ದಾರೆ.


ಧರ್ಮಸ್ಥಳ ಹೆಲಿಪ್ಯಾಡ್ ನಲ್ಲಿ ಬಂದಿಳಿದ ಅವರು ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದರು.

ಅಲ್ಲಿಂದ ನೇರವಾಗಿ ಬೆಳ್ತಂಗಡಿ ಮಾರ್ಗವಾಗಿ ಆಗಮಿಸಿ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನ ಸಮೀಪದಿಂದ ತಾಲೂಕಿನ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ವಾಣಿ ಕಾಲೇಜು ಮೈದಾನದಿಂದ ಲಾಯಿಲ ವೆಂಕಟ್ರಮಣ ದೇವಸ್ಥಾನದವರೆಗೆ ರೋಡ್ ಶೋ ನಡೆಸಲಿರುವರು.
ಈ ವೇಳೆ ಮಾಜಿ ಸಚಿವರಾದ ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಸಕ ಹರೀಶ್ ಪೂಂಜ, ವಿ.ಪ.ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಸಹಿತ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ.

ಬಳಿಕ ಬಂಟ್ವಾಳ, ಸುಳ್ಯ, ಪುತ್ತೂರು, ಮೂಡಬಿದ್ರೆಯಲ್ಲಿ ರ್ಯಾಲಿ ನಡೆಸಲಿರುವರು.

ಇದಕ್ಕೂ ಮುನ್ನ ಧರ್ಮಸ್ಥಳದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರು ಸುದ್ದಿಗೋಷ್ಠಿ ನಡೆಸಿದರು.