ಉಡುಪಿ: ಹೈಕೋರ್ಟ್ ಆದೇಶವನ್ನು ಧಿಕ್ಕರಿಸುವ ಮೂಲಕ ಆರು ಮಂದಿ ವಿದ್ಯಾರ್ಥಿನಿಯರು ತಾವು ಟೆರರಿಸ್ಟ್ ಸಂಘಟನೆಯ ಸದಸ್ಯರೆಂದು ಸಾಬೀತುಪಡಿಸಿದ್ದಾರೆ. ಈ ದೇಶದ ಕಾನೂನಿಗೆ ಗೌರವ ಕೊಡದವರು ಇಲ್ಲಿಇರಲು ಅರ್ಹರಿಲ್ಲ. ಅವರ ಧರ್ಮಪಾಲನೆಗೆ ಅವಕಾಶ ಇರುವ ದೇಶಕ್ಕೆ ಹೋಗಿ ಶಿಕ್ಷಣ ಮುಂದುವರಿಸಲಿ ಎಂದು ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ಆದೇಶ ಬಂದ ಮೇಲೂ ಆರು ಮಂದಿ ವಿದ್ಯಾರ್ಥಿನಿಯರು ಹಾಗೂ ಕೆಲವು ನಾಯಕರು ಬೇರೆ ಬೇರೆ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಕೆಲವೊಂದು ಹೇಳಿಕೆ ಕೊಡುವ ಮೂಲಕ ಕರಾವಳಿ ಭಾಗದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸುವ ಹುನ್ನಾರ ನಡೆಸುತ್ತಿದ್ದಾರೆ. ಇದು ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮೊಂದಿಗೆ ಪಿಎಫ್ ಐ, ಎಸ್ ಎಫ್ ಐ ಹಾಗೂ ಎಸ್ ಡಿಪಿಐ ಸಂಘಟನೆಗಳನ್ನು ಬೇರು ಸಮೇತ ಕಿತ್ತು ಬಿಸಾಡುತ್ತೇವೆ ಎಂದು ಗುಡುಗಿದರು.
ಕೋರ್ಟ್ ತೀರ್ಪನ್ನು ಪಾಲಿಸಿಕೊಂಡು ಹೋಗುವವರಿಗೆ ನಮ್ಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ಕೊಡುತ್ತೇವೆ. ಕಾನೂನಿಗೆ ಅಗೌರವ ತೋರಿದಲ್ಲಿ ನಿಮಗೆ ಈ ದೇಶದಲ್ಲಿ ಉಳಿಯಲು ಕೂಡ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ರು.
ಆರು ವಿದ್ಯಾರ್ಥಿಗಳಿಗೆ ಶಿಕ್ಷಣ ಮುಖ್ಯ ಅಲ್ಲ. ಪಿಎಫ್ ಐ, ಎಸ್ಎಫ್ ಐ ಸಂಘಟನೆಗಳ ಮೂಲಕ ಇತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಲ್ಲಿ ಇಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಕಾನೂನಿಗೆ ಗೌರವ ಕೊಡದಿದ್ದ ಮೇಲೂ ಅವರನ್ನು ಮನವರಿಕೆ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಂಬೇಡ್ಕರ್ ಬರೆದ ಸಂವಿಧಾನದ ಚೌಕಟ್ಟಿನೊಳಗೆ ಇವತ್ತು ತೀರ್ಪು ಬಂದಿದೆ. ಅವರಿಗೆ ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಎಂದು ಗೊತ್ತಿಲ್ಲ. ಹಾಗಾಗಿ ಅವರು ಪದೇ ಪದೇ ಅಂಬೇಡ್ಕರ್ ಹೆಸರು ಹೇಳಲು ಅರ್ಹರಲ್ಲ. ಈ ನೆಲದ ಕಾನೂನಿಗೆ ಅವರು ಗೌರವ ಕೊಡುವುದಿಲ್ಲವಾದರೆ ಅವರಿಗೆ ಹಿಜಾಬ್ ಹಾಕಿಕೊಂಡು ಧಾರ್ಮಿಕ ಆಚರಣೆ ಮಾಡಲು ಅವಕಾಶ ಕಲ್ಪಿಸುವ ದೇಶಗಳಿಗೆ ಹೋಗಲಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿಯೂ ನಮ್ಮ ಪರವಾಗಿ ತೀರ್ಪು ಬರುವ ನಿರೀಕ್ಷೆ ಇದೆ ಎಂದರು.