ಡಿ.7 ರಿಂದ ಕಟೀಲು ಯಕ್ಷಗಾನ ಮಂಡಳಿಯ ಆರು ಮೇಳಗಳ ತಿರುಗಾಟ; ಒಟ್ಟು 1002 ಸೇವೆಯಾಟ ಪ್ರದರ್ಶನ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ತಿರುಗಾಟ ಡಿ. 7 ರಿಂದ ಪ್ರಾರಂಭವಾಗಲಿದೆ. ಸಂಜೆ 5.15 ಗಂಟೆಗೆ ದೇವಸ್ಥಾನದಲ್ಲಿ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ. ಸಂಜೆ 6.45 ರಿಂದ ಕಲಾವಿದರಿಗೆ ಗೆಜ್ಜೆ ಹಸ್ತಾಂತರ, ರಾತ್ರಿ 8.30ಕ್ಕೆ ಚೌಕಿ ಪೂಜೆ, ಬಳಿಕ ಆರು ರಂಗಸ್ಥಳಗಳಲ್ಲಿ ಏಕಕಾಲಕ್ಕೆ ಪೂರ್ವರಂಗ ಪ್ರದರ್ಶನ, 10.30ಕ್ಕೆ ಪಾಂಡವಾಶ್ವಮೇಧ ಯಕ್ಷಗಾನ ಬೆಳಗ್ಗಿನ ಜಾವದವರೆಗೆ ನಡೆಯಲಿದೆ ಎಂದು ಕಟೀಲು ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಸನತ್ ಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.

ಈ ಬಾರಿ ಅಧಿಕಮಾಸದ ಕಾರಣ ತಿರುಗಾಟ ತಡವಾಗಿ ಆರಂಭವಾಗುತ್ತಿದ್ದು, ಮೇ 25 ರತನಕ 167 ದಿನಗಳ ಯಕ್ಷಗಾನದ ತಿರುಗಾಟ ನಡೆಯಲಿದೆ. ಆಸ್ರಣ್ಣರು ಕಲಾವಿದರಿಗೆ ಗೆಜ್ಜೆ ಕೊಡುವ ಮೂಲಕ ತಿರುಗಾಟ ಆರಂಭವಾಗಲಿದ್ದು, ಅದಕ್ಕೂ ಮುನ್ನ ಮೇಳದ ದೇವರು, ಆಭರಣ, ಆಯುಧ, ಇತ್ಯಾದಿಗಳಿಗೆ ಪೂಜೆ ನಡೆಯಲಿದೆ ಎಂದು ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದ್ದಾರೆ.

ಈ ವರ್ಷ ಆರು ಮೇಳಗಳಿಂದ ಒಟ್ಟು 1002 ಸೇವೆಯಾಟಗಳು ಪ್ರದರ್ಶಿತವಾಗಲಿವೆ. ಪ್ರತಿ ವರ್ಷ 450 ಆಟಗಳು ಖಾಯಂ ಇದ್ದ ಕಾರಣ ಸುಮಾರು 550 ಆಟಗಳನ್ನು ಮಾತ್ರ ನೀಡಲು ಸಾಧ್ಯವಾಗಿದೆ. ಕಳೆದ ವರ್ಷ 774 ಹೊಸ ಆಟಗಳು ಬುಕಿಂಗ್ ಆಗಿವೆ.

ವರ್ಷಂಪ್ರತಿ ಮೇಳದ ಉಡುಗೆ, ಮಣಿ ಸಾಮಾನು, ಪರಿಕರಗಳನ್ನು ರಿಪೇರಿ ಮಾಡಲಾಗುತ್ತಿದ್ದು, ಈ ಬಾರಿ ವೇಷ ಭೂಷಣಗಳನ್ನು ಹೊಸದಾಗಿ ತಯಾರಿಸಿದ್ದು, ಮಣಿ ಸಾಮಾನುಗಳಲ್ಲದೆ ಕಿರೀಟ ಮತ್ತಿತರ ಸಾಮಾಗ್ರಿ ಹೊಸದಾಗಿ ಸಿದ್ಧವಾಗಿವೆ. ಐದಾರು ಕಲಾವಿದರು ಹೊಸದಾಗಿ ಮೇಳಗಳಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ತಿಳಿಸಿದ್ದಾರೆ.