ಸಿರಿ ಧಾನ್ಯಗಳ ಆಹಾರ ಮತ್ತು ಸಿರಿ ಸ್ವದೇಶಿ ಉತ್ಪನ್ನಗಳ ಪ್ರದರ್ಶನ- ಮಾರಾಟ ಮೇಳ ಉದ್ಘಾಟನೆ

ಕುಂದಾಪುರ: ದೇಶದ ರೈತರು ಇಂದು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ. ಸಿರಿ ಧಾನ್ಯಗಳು ಯಾವತ್ತೋ ನಮ್ಮ ತಟ್ಟೆಯಿಂದ ಮಾಯವಾಗಿವೆ. ನಾವೆಲ್ಲರೂ ಫಾಸ್ಟ್‍ಫುಡ್‍ಗಳಿಗೆ ದಾಸರಾಗುತ್ತಿದ್ದೇವೆ. ನಮ್ಮ ಜೀವನಕ್ರಮದಿಂದಾಗಿ ಬಹಳಷ್ಟು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದಕ್ಕೆ ಉತ್ತರವಾಗಿ ಸಿರಿ ಧಾನ್ಯಗಳು ಮತ್ತೆ ಜನಪ್ರಿಯವಾಗುತ್ತಿವೆ ಎಂದು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ನಿರ್ದೇಶಕಿ ಮನೋರಮಾ ಭಟ್ ಹೇಳಿದರು.

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ತಾಲೂಕು ಇದರ ವತಿಯಿಂದ ಕುಂದಾಪುರ ಕುಂದೇಶ್ವರ ದೇವಸ್ಥಾನ ಇವರ ಸಹಯೋಗದೊಂದಿಗೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಇಲ್ಲಿನ ಕುಂದೇಶ್ವರ ದೇವಳದ ಆವರಣದಲ್ಲಿ ನಡೆದ ಸಿರಿ ಸ್ವದೇಶಿ ಉತ್ಪನ್ನಗಳ ಹಾಗೂ ಸಿರಿ ಧಾನ್ಯಗಳ ಆಹಾರ ಪ್ರದರ್ಶನ- ಮಾರಾಟ ಮೇಳದಲ್ಲಿ ದೋಸೆ ಹುಯ್ಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ನವಣೆ ಅವರ ಆಹಾರವಾಗಿತ್ತು. ಆದರೆ ಕಾಲಕ್ರಮೇಣ ಸರ್ಕಾರದ ನೀತಿ ಹಾಗೂ ಆಧುನಿಕ ಆಹಾರ ಪದ್ದತಿಗಳಿಂದಾಗಿ ಆಹಾರ ಪದ್ದತಿ ಬದಲಾಯಿತು. ನಾವು ಉತ್ತರಕರ್ನಾಟಕ ಭಾಗದ ರೈತರಿಗೆ ಅವರ ತೋಟಗಳಲ್ಲಿ ಮತ್ತೆ ಸಿರಿ ಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹವನ್ನು ಕೊಟ್ಟು ತಾಂತ್ರಿಕತೆಯನ್ನು ತಿಳಿಸಿ ಅವರಿಂದ ಸಿರಿ ಧಾನ್ಯಗಳನ್ನು ಖರೀದಿ ಮಾಡುತ್ತಿದ್ದೇವೆ. ಸಿರಿ ಧಾನ್ಯ ಆಹಾರ ಮೇಳ ಮತ್ತು ಸಿರಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡುವ ಉದ್ದೇಶವೇ ಸಿರಿ ಧಾನ್ಯಗಳನ್ನು ಜನರಿಗೆ ಪರಿಚಯಿಸಬೇಕು ತನ್ಮೂಲಕ ತಮ್ಮ ದಿನನಿತ್ಯದ ಆಹಾರಗಳಲ್ಲಿ ಅವರು ಬಳಸಿಕೊಳ್ಳಬೇಕು ಎನ್ನುವುದು. ಸಿರಿ ಧಾನ್ಯಗಳನ್ನು ಖರೀದಿಸುವುದರಿಂದ ಸಾವಿರಾರು ರೈತರಿಗೆ ಮಹಿಳೆಯರಿಗೆ ಜೀವನವನ್ನು ಕೊಟ್ಟಂತ್ತಾಗುತ್ತದೆ ಎಂದರು.

ಭಾರತದಲ್ಲಿ ಶ್ರೀಮಂತರ ಮತ್ತು ಬಡವರ ಅಂತರ ಸಾಕಷ್ಟು ಜಾಸ್ತಿ ಇದೆ. ಯಾವತ್ತೂ ಬಡವರು ಅಭಿವೃದ್ದಿಯ ಬಗ್ಗೆ ಕನಸನ್ನು ಕಾಣುತ್ತಿರುತ್ತಾರೆ. ಪ್ರಗತಿ ಬಂಧುಗಳ ಪ್ರಗತಿ ನಿಧಿ ತೆಗೆದುಕೊಂಡ ಬಳಿಕ ಅವರ ಆರ್ಥಿಕ ಅಭಿವೃದ್ದಿ ಇನ್ನೂ ಹೆಚ್ಚಾಗಬೇಕು ಎನ್ನುವ ದೃಷ್ಠಿಯಲ್ಲಿ ಬೇರೆ ಬೇರೆ ಸ್ವಉದ್ಯೋಗಗಳನ್ನು ಮಾಡಲು ಪ್ರೋತ್ಸಾಹವನ್ನು ಕೊಡುತ್ತಿದ್ದೇವೆ. ಯಾವುದೇ ಸ್ವಸಹಾಯ ಸಂಘಗಳು ಆರ್ಥಿಕಾಭಿವೃದ್ದಿ ಚಟುವಟಿಕೆಗಳನ್ನು ಹಮ್ಮಿಕೊಂಡಾಗ ಅದು ಉತ್ಪಾದಕ ಕ್ಷೇತ್ರದಲ್ಲಿದ್ದಾಗ ಮಾರುಕಟ್ಟೆ ಎನ್ನುವುದು ಒಂದು ದೊಡ್ಡ ಸವಾಲು. ಈ ಸವಾಲಿಗೆ ಉತ್ತರವಾಗಿ ಪ್ರಯೋಗಾತ್ಮಕವಾಗಿ ಆರಂಭಗೊಂಡ ಸಂಸ್ಥೆ ಸಿರಿ ಗ್ರಾಮೋದ್ಯೋಗ ಸಂಸ್ಥೆ. ದೇಶದಲ್ಲಿ ಎಲ್ಲೂ ಇರದ ಅಪರೂಪದ ಪ್ರಯತ್ನವನ್ನು ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.

ಸ್ವದೇಶಿ ಎಂದು ಹೇಳಿಕೊಳ್ಳುವ, ಬಡವರ ಬಗ್ಗೆ ಕೆಲಸ ಮಾಡುವ ನೆಲೆಯಲ್ಲಿ ಕೆಲಸ ಮಾಡುವ ಹಲವಾರು ಸಂಘಸಂಸ್ಥೆಗಳನ್ನು ನಾವು ನೋಡಿದ್ದೇವೆ. ವಾಣಿಜ್ಯವಾಗಿ ಹೆಚ್ಚು ಲಾಭ ಗಳಿಸುತ್ತಿರುವ ಸಂಸ್ಥೆಗಳು ಇವತ್ತು ಇದ್ದಾವೆ. ಆದರೆ ನಿಜಾರ್ಥದಲ್ಲಿ ಸ್ವದೇಶಿ ಎಂಬ ನೆಲೆಗಟ್ಟಿನಲ್ಲಿ ಬಡವರ ಬಗ್ಗೆ ಕೆಲಸ ಮಾಡುವಂತಹ ಲಾಭ ರಹಿತ ಸಂಸ್ಥೆ ಸಿರಿ ಗ್ರಾಮೋದ್ಯೋಗ ಸಂಸ್ಥೆ. ಹೆಚ್ಚು ಸಂಸ್ಥೆಗಳು ಲಾಭದಾಯಕವಾಗಿದ್ದು, ಸರ್ಕಾರದ ನಿಯಮಗಳ ಪ್ರಕಾರ ಸಮಾಜಸೇವೆ ಮಾಡಬೇಕೆನ್ನುವ ನೆಲೆಯಲ್ಲಿ ಅದರಿಂದ ಬಂದ ಲಾಭವನ್ನು ಸಮಾಜಕ್ಕೆಕೊಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಗುಡಿಕೈಗಾರಿಕೆ ಮಾಡುತ್ತಿರುವ ಮಹಿಳೆಯರ ಜೊತೆಗೆ ಬಹಳಷ್ಟು ಸಂಸ್ಥೆಗಳು ಇದ್ದಾವೆ. ಗರಿಷ್ಠ ಪ್ರಮಾಣದ ಬೆಲೆ ನಿಗಧಿಪಡಿಸಿ ಮಾರಾಟ ಮಾಡುವ ಉತ್ಪನ್ನಗಳು ಲಭ್ಯವಿವೆ. ಆದರೆ ಸಿರಿ ಸಂಸ್ಥೆ ಯಾವುದೇ ರೀತಿಯ ಕೌಶಲ್ಯವಿಲ್ಲದೆ ಬೇರೆ ಬೇರೆ ಕಾರಣಗಳಿಂದ ಅವರಿಗೆ ಒಳ್ಳೆಯ ಅವಕಾಶಗಳಿಗಾಗಿ ನಗರಗಳಿಗೆ ಹೋಗಲಾರದ ಮಹಿಳೆಯರ ಜೊತೆ ಅವರವರ ಹಳ್ಳಿಗಳಲ್ಲಿ ಅವರಿಗೆ ಕೌಶಲ್ಯವನ್ನು ಕಲಿಸಿ ಇಂದು ಸಿರಿ ಸಂಸ್ಥೆ ಸಿರಿ ಬ್ರ್ಯಾಂಡ್‍ನ ಉತ್ಪನ್ನಗಳನ್ನು ತಯಾರು ಮಾಡುತ್ತಿದೆ. ಸಿರಿ ಧಾನ್ಯ ಆಹಾರ ಮೇಳದಲ್ಲಿ ಮಾರಾಟ ಮಾಡುತ್ತಿರುವ ಉತ್ಪನ್ನಗಳೆಲ್ಲವೂ ಮಹಿಳೆಯರು ಮಾಡಿರುವ ಉತ್ಪನ್ನಗಳು. ಯಾವ ಉತ್ಪನ್ನಗಳೂ ಕೂಡ ಮನೆಗಳಲ್ಲಿ ತಯಾರಾದ ಉತ್ಪನ್ನಗಳಲ್ಲ. ಇವೆಲ್ಲವೂ ಕೂಡ ಹಳ್ಳಿಗಳಲ್ಲಿ ಇರುವಂತಹ ಸಣ್ಣ ಕಾರ್ಖಾನೆಗಳಲ್ಲಿ ಸರ್ಕಾರದ ಮಾನದಂಡದ ಅಡಿಯಲ್ಲಿ ತಯಾರಿಸಿರುವ ಉತ್ಪನ್ನಗಳು ಎಂದರು.

ಸಮಾಜಸೇವಕ ಜಿ.ದತ್ತಾನಂದ ಗಂಗೊಳ್ಳಿ ಅವರು ಸಿರಿ ಸ್ವದೇಶಿ ಮಳಿಗೆ ಉದ್ಘಾಟಿಸಿದರು. ಕುಂದೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣಾನಂದ ಚಾತ್ರ ಸಿರಿ ಆಹಾರ ಮೇಳ ಉದ್ಘಾಟಿಸಿ ಶುಭಹಾರೈಸಿದರು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಸತೀಶ್ ಗಾಣಿಗ ಅಧ್ಯಕ್ಷತೆವಹಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪುರುಷೋತ್ತಮ್ ಪಿ.ಕೆ., ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎನ್.ಅಶೋಕ್ ಆಚಾರ್ಯ, ಜೇಸಿಐ ಕುಂದಾಪುರ ಸದಸ್ಯ ಮುತಾರಿಫ್ ತೆಕ್ಕಟ್ಟೆ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮಂಜು ಬಿಲ್ಲವ, ಮೈಲಾರೇಶ್ವರ ದೇವಸ್ಥಾನ ಅಧ್ಯಕ್ಷ ಅಣ್ಣಪ್ಪಯ್ಯ ಮಾಸ್ಟರ್, ರಾಮಕ್ಷತ್ರಿಯ ಮಹಿಳಾ ಮಂಡಳಿ ಅಧ್ಯಕ್ಷೆ ಶೈಲಾ ಶರಶ್ಚಂದ್ರ, ರಾಮಕ್ಷತ್ರಿಯ ಯುವಕ ಮಂಡಳ ಅಧ್ಯಕ್ಷ ಸಿ.ಎಚ್.ಗಣೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಮುರಳೀಧರ ಕೆ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕುಂದಾಪುರ ಮೇಲ್ವಿಚಾರಕ ಪಾಂಡ್ಯನ್ ಸ್ವಾಗತಿಸಿದರು. ಶಾಂತಾ ವಾಸುದೇವ್ ಪ್ರಾರ್ಥಿಸಿದರು. ಕೃಷಿ ಅಧಿಕಾರಿ ಚೇತನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.