ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಚುರುಕುಗೊಂಡಿದ್ದು, ಮ್ಯಾಪಿಂಗ್ ಆಗದ ಹಾಗೂ ಮಾಹಿತಿಯಲ್ಲಿ ದೋಷವಿರುವ 43.80 ಲಕ್ಷ ಮತದಾರರನ್ನು ಚುನಾವಣಾ ಆಯೋಗ ಗುರುತಿಸಿದೆ. ಈ ಮತದಾರರಿಗೆ ಶೀಘ್ರದಲ್ಲೇ ನೋಟಿಸ್ ಜಾರಿಯಾಗಲಿದ್ದು, ದಾಖಲೆಗಳ ಪರಿಶೀಲನೆ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಕರಡು ಮತದಾರರ ಪಟ್ಟಿ ಆಗಸ್ಟ್ 24ರಂದು ಪ್ರಕಟವಾಗಲಿದ್ದು, ಅದೇ ದಿನದಿಂದ ಅಕ್ಟೋಬರ್ 22ರವರೆಗೆ ನೋಟಿಸ್ ಜಾರಿ, ದಾಖಲೆ ಪರಿಶೀಲನೆ ಹಾಗೂ ತಕರಾರು ವಿಲೇವಾರಿ ಪ್ರಕ್ರಿಯೆ ನಡೆಯಲಿದೆ. ನೋಟಿಸ್ ಬಂದ ತಕ್ಷಣವೇ ಮತದಾರರ ಹೆಸರು ಪಟ್ಟಿಯಿಂದ ತೆಗೆದುಹಾಕಲಾಗುವುದಿಲ್ಲ.
ಯಾರಿಗೆ ನೋಟಿಸ್?
ರಾಜ್ಯದ ಕರಡು ಮತದಾರರ ಪಟ್ಟಿಯಲ್ಲಿರುವ ಸುಮಾರು 4.46 ಕೋಟಿ ಮತದಾರರ ಪೈಕಿ ಶೇ.9.81ರಷ್ಟು ಮಂದಿಗೆ ನೋಟಿಸ್ ನೀಡಲಾಗುತ್ತದೆ.
- 23.45 ಲಕ್ಷ ಮ್ಯಾಪಿಂಗ್ ಆಗದ ಮತದಾರರು: 2002ರ ಮತದಾರರ ಪಟ್ಟಿಯೊಂದಿಗೆ ತಮ್ಮ ಅಥವಾ ಪೋಷಕರ ವಿವರ ಹೊಂದಾಣಿಕೆಯಾಗದವರು.
- 20.35 ಲಕ್ಷ ಮಾಹಿತಿ ದೋಷ ಹೊಂದಿರುವವರು: ಹೆಸರು, ವಯಸ್ಸು, ತಂದೆಯ ಹೆಸರು ಸೇರಿದಂತೆ ವಿವಿಧ ವಿವರಗಳಲ್ಲಿ ತಾಂತ್ರಿಕ ವ್ಯತ್ಯಾಸ ಕಂಡುಬಂದಿರುವವರು.
ಬೆಂಗಳೂರಿನಲ್ಲೇ ಹೆಚ್ಚು ನೋಟಿಸ್
ರಾಜ್ಯದಲ್ಲೇ ಅತಿ ಹೆಚ್ಚು ನೋಟಿಸ್‌ಗಳು ಬೆಂಗಳೂರಿನಲ್ಲಿ ಜಾರಿಯಾಗಲಿವೆ. 24 ಲಕ್ಷಕ್ಕೂ ಅಧಿಕ ನೋಟಿಸ್‌ಗಳು ಬೆಂಗಳೂರು ನಗರ ವ್ಯಾಪ್ತಿಯ ಮತದಾರರಿಗೆ ತಲುಪುವ ಸಾಧ್ಯತೆ ಇದೆ.
ನೋಟಿಸ್ ಬಂದರೆ ಏನು ಮಾಡಬೇಕು?
BLO ಭೇಟಿ: ಬೂತ್ ಮಟ್ಟದ ಅಧಿಕಾರಿ (BLO) ಮನೆಗೆ ಭೇಟಿ ನೀಡಿ ನೋಟಿಸ್ ನೀಡಲಿದ್ದಾರೆ.
ದಾಖಲೆಗಳ ಸಲ್ಲಿಕೆ: ನೋಟಿಸ್‌ನಲ್ಲಿ ಸೂಚಿಸಿರುವ ದಾಖಲೆಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸಬೇಕು. QR ಕೋಡ್ ಮೂಲಕ ದಾಖಲೆಗಳನ್ನು ಆನ್‌ಲೈನ್‌ನಲ್ಲೂ ಅಪ್‌ಲೋಡ್ ಮಾಡಲು ಅವಕಾಶವಿರಲಿದೆ.
ವಿಚಾರಣೆಗೆ ಹಾಜರಾಗಬೇಕು: ನೋಟಿಸ್‌ನಲ್ಲಿ ನೀಡಿರುವ ದಿನಾಂಕ ಮತ್ತು ಸಮಯದಂದು ಸಂಬಂಧಪಟ್ಟ ಕಚೇರಿ ಅಥವಾ ಮತಗಟ್ಟೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕಾಗುತ್ತದೆ.
ಮೊದಲ ಬಾರಿ ಗೈರಾದರೆ?
ಮೊದಲ ಬಾರಿ ವಿಚಾರಣೆಗೆ ಹಾಜರಾಗದಿದ್ದರೆ ತಕ್ಷಣ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಮತ್ತೊಂದು ದಿನಾಂಕ ನೀಡಿ ವಿಚಾರಣೆಗೆ ಅವಕಾಶ ಕಲ್ಪಿಸಲಾಗುತ್ತದೆ.
ಆದರೆ ಎರಡನೇ ಬಾರಿಯೂ ಗೈರುಹಾಜರಾದರೆ ಮೂರನೇ ಅವಕಾಶ ನೀಡಲಾಗುವುದಿಲ್ಲ. ಬಳಿಕ ಲಭ್ಯವಿರುವ ನಿಯಮಗಳು ಮತ್ತು ಪರಿಶೀಲನಾ ಪ್ರಕ್ರಿಯೆಯ ಆಧಾರದ ಮೇಲೆ ಮತದಾರರ ಪಟ್ಟಿಯಲ್ಲಿನ ಹೆಸರಿನ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.















