ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೊದಲ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು ಇದ್ದು, ಪರಿಷ್ಕರಣೆ ವೇಳೆ 1,07,96,339 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, SIR ಪ್ರಕ್ರಿಯೆಯಲ್ಲಿ 15,17,042 ಮಂದಿ ಗೈರಾಗಿದ್ದಾರೆ. ಒಟ್ಟು 65,45,679 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದು, 16,39,864 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಒಂದಕ್ಕಿಂತ ಹೆಚ್ಚು ಬಾರಿ ಮತದಾರರ ಪಟ್ಟಿಯಲ್ಲಿ ಹೆಸರು ಕಂಡುಬಂದ 7,09,870 ಮಂದಿ ಹಾಗೂ ಇತರ ವರ್ಗಕ್ಕೆ ಸೇರಿದ 3,83,884 ಮಂದಿಯ ಹೆಸರುಗಳನ್ನೂ ಪರಿಷ್ಕರಣೆ ವೇಳೆ ಗುರುತಿಸಲಾಗಿದೆ.
SIR ಪ್ರಕ್ರಿಯೆಗೆ ಸಂಬಂಧಿಸಿದಂತೆ ಒಟ್ಟು 43,81,335 ಮಂದಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು.
ಮತದಾರರ ವರ್ಗೀಕರಣ
- ಸಾಮಾನ್ಯ ಮತದಾರರು: 4,46,35,975
- 18–19 ವರ್ಷದ ಯುವ ಮತದಾರರು: 3,70,341
- 20–29 ವರ್ಷದ ಮತದಾರರು: 83,87,880
- 85 ವರ್ಷ ಮೇಲ್ಪಟ್ಟವರು: 3,92,302
- NRI ಮತದಾರರು: 951
- ಸೇವೆಯಲ್ಲಿರುವ ಮತದಾರರು: 44,176
- ವಿಶೇಷ ಚೇತನ ಮತದಾರರು (PwD): 5,55,691
43 ಲಕ್ಷ ಮತದಾರರಿಗೆ ನೋಟಿಸ್
ಸುಮಾರು 43 ಲಕ್ಷ ಮತದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಮುಂದುವರಿದಿದೆ. ನೋಟಿಸ್ ನೀಡುವ ವಿಧಾನ ಹಾಗೂ ಪರಿಶೀಲನಾ ಪ್ರಕ್ರಿಯೆ ಕುರಿತು ಅಧಿಕಾರಿಗಳಿಗೆ ಕಾರ್ಯಾಗಾರ ನಡೆಸಲಾಗುತ್ತಿದೆ. ಪರಿಶೀಲನಾ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ನೋಟಿಸ್ ವಿತರಿಸಲು 3 ಸಾವಿರಕ್ಕೂ ಅಧಿಕ ARO ಮತ್ತು EROಗಳನ್ನು ನೇಮಕ ಮಾಡಲಾಗುತ್ತದೆ.
ಅಕ್ಟೋಬರ್ 22ರೊಳಗೆ ನೋಟಿಸ್ ನೀಡುವ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಒಬ್ಬ AROಗೆ ಸರಾಸರಿ 1,000 ನೋಟಿಸ್ಗಳ ಹೊಣೆಗಾರಿಕೆ ಇರಲಿದೆ ಎಂದು ಅನ್ಬುಕುಮಾರ್ ತಿಳಿಸಿದ್ದಾರೆ.
ಡ್ರಾಫ್ಟ್ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ ಹೆಚ್ಚುವರಿ ದಾಖಲೆಗಳ ಅಗತ್ಯವಿರುವ ಮತದಾರರಿಗೆ ಮಾತ್ರ ಮನೆಗೆ ನೋಟಿಸ್ ನೀಡಲಾಗುತ್ತದೆ. ERO ನೀಡುವ ನೋಟಿಸ್ನಲ್ಲಿ ನೋಟಿಸ್ ನೀಡಲು ಕಾರಣವನ್ನೂ ಉಲ್ಲೇಖಿಸಲಾಗುತ್ತದೆ. ಅಧಿಕಾರಿಗಳು ಖುದ್ದು ಮನೆಗೆ ತೆರಳಿ ನೋಟಿಸ್ ನೀಡಲಿದ್ದು, ಮೊಬೈಲ್ ಸಂದೇಶದ ಮೂಲಕ ನೋಟಿಸ್ ಕಳುಹಿಸಲಾಗುವುದಿಲ್ಲ.
ನೋಟಿಸ್ ಪಡೆದವರಿಗೆ ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ನಿಗದಿತ ಸ್ಥಳದಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು.
ಹೆಸರು, ವಿಳಾಸ ಬದಲಾವಣೆಗೆ ಫಾರ್ಮ್-8
ಹೆಸರು ಪರಿಷ್ಕರಣೆ, ಜನ್ಮ ದಿನಾಂಕ ತಿದ್ದುಪಡಿ ಅಥವಾ ವಿಳಾಸ ಬದಲಾವಣೆಗೆ ಫಾರ್ಮ್-8 ಸಲ್ಲಿಸಬೇಕು. ನಗರ ಪ್ರದೇಶಗಳಲ್ಲಿ ಪ್ರಮುಖವಾಗಿ ‘ನೋ ಮ್ಯಾಪಿಂಗ್’ ಸಮಸ್ಯೆ ಕಂಡುಬಂದಿದೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅರ್ಹರು ಸೆಪ್ಟೆಂಬರ್ 23ರೊಳಗೆ ಫಾರ್ಮ್-6 ಸಲ್ಲಿಸಿದರೆ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಲಿದೆ ಎಂದು ಅನ್ಬುಕುಮಾರ್ ತಿಳಿಸಿದ್ದಾರೆ.















