ಚರ್ಮರೋಗ ಪೀಡಿತನ ಆಧಾರ್ ಕಾರ್ಡ್ ಸಮಸ್ಯೆಗೆ ಒಂದೇ ಟ್ವೀಟ್ ನಿಂದ ದೊರಕಿತು ನಾಲ್ಕೇ ದಿನಗಳಲ್ಲಿ ಪರಿಹಾರ!

ಮಂಡ್ಯ : ಬಗೆಯರಿಯದೇ ಉಳಿದಿದ್ದ ಆಧಾರ್ ಕಾರ್ಡ್ ಸಮಸ್ಯೆಯೊಂದು ಕೇವಲ ಒಂದೇ ಟ್ವೀಟ್ ನಿಂದ ನಾಲ್ಕೇ ದಿನಗಳಲ್ಲಿ ಬಗೆಹರಿದಿದೆ. ಮಂಡ್ಯದ ತಂಡಸನಹಳ್ಳಿಯ ನೂತನ್ ಎನ್ನುವ ಯುವಕ ವಿಚಿತ್ರ ಚರ್ಮ ರೋಗದಿಂದ ಬಳಲುತ್ತಿದ್ದು, ಆತನ ಆಧಾರ್ ಕಾರ್ಡ್ ಲಭ್ಯವಿರಲಿಲ್ಲವಾದ್ದರಿಂದ ಆತನಿಗೆ ಸರಕಾರದ ಯಾವುದೇ ಸವಲತ್ತುಗಳು ದೊರೆಯುತ್ತಿರಲಿಲ್ಲ.

ನೂತನ್ ನ ಈ ಸಮಸ್ಯೆಯ ಬಗ್ಗೆ ಯುವ ರೈತ ಮುಖಂಡ, ‘ಸಾವಯವ ಮಂಡ್ಯ’ದ ಸಿಇಒ ಮತ್ತು ಸಂಸ್ಥಾಪಕ ಮಧುಚಂದನ್ ಎಸ್ ಸಿ ಗಮನಹರಿಸಿದ್ದಾರೆ. ಮಧುಚಂದನ್ ಈ‌ ಬಗ್ಗೆ ಟ್ವೀಟ್ ಮಾಡಿ ನೂತನ್ ಫೋಟೋ ಹಾಕಿ ಪ್ರಧಾನಿ ಮೋದಿ ಮತ್ತು ಪ್ರಧಾನಿ ಕಚೇರಿ ಎರಡನ್ನೂ ಟ್ಯಾಗ್ ಮಾಡಿದ್ದಾರೆ.

ಯುವ ರೈತ ಮುಖಂಡ ಮಧು ಚಂದನ್ ಎಸ್ ಸಿ

“ಈತನ ಹೆಸರು ನೂತನ್, ಮಂಡ್ಯದಲ್ಲಿ ವಾಸವಾಗಿದ್ದು, ಅಂಗವಿಕಲನಾಗಿದ್ದಾನೆ. ವೈದ್ಯಕೀಯ ಸ್ಥಿತಿಯಿಂದ (ಬೆರಳಚ್ಚು ಅಥವಾ ರೆಟಿನಾ ಸ್ಕ್ಯಾನ್ ಪಡೆಯಲು ಸಾಧ್ಯವಾಗದ) ಅವನು ತನ್ನ ಆಧಾರ್ ಕಾರ್ಡ್ ಪಡೆಯಲು ಸಾಧ್ಯವಾಗುತ್ತಿಲ್ಲ, ಅವನು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾನೆ. ಅವನು ತನ್ನ ಆಧಾರ್ ಕಾರ್ಡ್ ಅನ್ನು ಹೇಗೆ ಪಡೆಯಬೇಕು?” ಎಂದು ಆತನ ಫೋಟೋ ಸಮೇತ ಟ್ವೀಟಿಸಿದ್ದಾರೆ.

ಈ ಒಂದೇ ಟ್ವೀಟ್ ಗೆ ಬೆಂಗಳೂರಿನ ಆಧಾರ್ ಕೇಂದ್ರದ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ. ಟ್ವೀಟ್ ನೋಡಿದ ಬಳಿಕ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆ ಬಳಿಕ ನೂತನ್‌ಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆಧಾರ್ ಕಾರ್ಡ್ ಸಮಸ್ಯೆಯನ್ನು ಕೇವಲ ನಾಲ್ಕೇ ದಿನಗಳಲ್ಲಿ ಬಗೆಹರಿಸಿರುವ ಬಗ್ಗೆ ಟ್ವೀಟಿಸಿರುವ ಮಧು ಚಂದನ್ ಪಿಎಂಒ, ನರೇಂದ್ರ ಮೋದಿ ಮತ್ತು ಯುಐಡಿಐ ಬೆಂಗಳೂರು ಇವರಿಗೆ ಧನ್ಯವಾದ ಸಮರ್ಪಿಸಿದ್ದಾರೆ.

ನೂತನ್ ಮತ್ತು ಅವರ ಕುಟುಂಬ ರೈತ ಮುಖಂಡ ಮಧು ಚಂದನ್‌ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

ಚಿತ್ರ ಕೃಪೆ: ಮಧು ಚಂದನ್/ಟ್ವಿಟರ್