ಬಹು ಧಾರ್ಮಿಕ ಭಾರತದಲ್ಲಿ ಯಾವುದೇ ಒಂದು ಧರ್ಮ ಏಕಸ್ವಾಮ್ಯ ಸಾಧಿಸಲು ಸಾಧ್ಯವಿಲ್ಲ: ಪ್ರೊ. ಕನುಂಗೋ

ಮಣಿಪಾಲ: ಭಾರತೀಯ ಪರಂಪರೆಯು ಬಹು-ಸಾಂಸ್ಕೃತಿಕ ಮತ್ತು ಬಹು-ಧಾರ್ಮಿಕವಾಗಿದ್ದು, ಯಾವುದೇ ಒಂದು ಧರ್ಮವು ಅದರ ಮೇಲೆ ಏಕಸ್ವಾಮ್ಯತ್ವವನ್ನು ಹೊಂದಲು ಸಾಧ್ಯವಿಲ್ಲ ಎಂದು ಜರ್ಮನಿಯ ಎರ್ಫರ್ಟ್ ವಿಶ್ವವಿದ್ಯಾಲಯದ ಫೆಲೋ ಪ್ರೊಫೆಸರ್ ಪ್ರಳಯ್ ಕನುಂಗೋ ಹೇಳಿದರು.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಉಪನ್ಯಾಸದಲ್ಲಿ ಧರ್ಮ, ಪರಂಪರೆ ಮತ್ತು ಅಸ್ಮಿತೆಯ ಕುರಿತು ಅವರು ಮಾತನಾಡಿದರು.

ಖಂಡಿತವಾಗಿಯೂ ಧರ್ಮ, ಪರಂಪರೆ ಮತ್ತು ಅಸ್ಮಿತೆ ಒಂದೇ ರೀತಿಯ ಪರಿಕಲ್ಪನೆಗಳು. ಆದಾಗ್ಯೂ, ಪರಂಪರೆ ಎಂಬುದು ಅಸ್ಮಿತೆಯನ್ನು ಮೀರಿ ಎಲ್ಲಾ ಧರ್ಮಗಳಿಗೆ ಸೇರಿದ್ದು ಎಂದರು.

ಪಾರಂಪರಿಕ ಸ್ಥಳವಾದ ವಾರಣಾಸಿ-ಕಾಶಿ ಕುರಿತ ತಮ್ಮ ನಿರ್ದಿಷ್ಟ ಅಧ್ಯಯನವನ್ನು ತೆರೆದಿಟ್ಟ ಪ್ರೊ.ಕನುಂಗೋ ಅವರು ವಾರಣಾಸಿಯ ಪರಂಪರೆಯು ವಿವಿಧ ಧರ್ಮಗಳ ಎಳೆಗಳನ್ನು ಹೊಂದಿದೆ ಮತ್ತು ಯಾವುದೇ ಒಂದು ಧರ್ಮವು ಈ ಪರಂಪರೆಯ ಏಕಸ್ವಾಮ್ಯತ್ವವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. ಈ ನಿಟ್ಟಿನಲ್ಲಿ ಹಲವು ನಿದರ್ಶನಗಳನ್ನೂ ಅವರು ಉಲ್ಲೇಖಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಶಾಂತಿಗೆ ಕಾರಣವಾಗುವ ಬದಲು ಭಾವೋದ್ರೇಕವನ್ನು ಹುಟ್ಟುಹಾಕುವ ಧರ್ಮ, ಪರಂಪರೆ ಮತ್ತು ಅಸ್ಮಿತೆಯ ಬಗ್ಗೆ ನಿರ್ಲಿಪ್ತ ವಿಚಾರಣೆ ನಮ್ಮದಾಗಬೇಕು ಎಂದರು.

ನೆಹರು ಅಧ್ಯಯನ ಕೇಂದ್ರದ ಪ್ರೊ.ರಾಜಾರಾಂ ತೋಳ್ಪಾಡಿ ಮಾತನಾಡಿ, ವಾರಣಾಸಿಯ ವೈವಿಧ್ಯತೆಯೇ ಅದರ ಶ್ರೀಮಂತಿಕೆ ಎಂದರು.

ಪ್ರೊ.ಕೆ.ಪಿ.ರಾವ್, ಪ್ರೊ.ಫಣಿರಾಜ್ ಸೇರಿದಂತೆ ಹಲವು ವಿದ್ವಾಂಸರು, ವಿವಿಧ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.