ಪ್ರಗ್ನೆಂಟ್ ಆದ್ರೆ ಮುಟ್ಟಾಗಲ್ವಂತೆ ಅಂತ ಯಾರೋ ಹೇಳಿದಾಗ ಅಳುಕು ಕಾಡಿತ್ತು: ಹುಡುಗಿಯೊಬ್ಬಳ ಪಿಸುಮಾತು

ನಾನಿನ್ನೂ ಪುಟ್ಟ ಹುಡುಗಿಯಾಗಿದ್ದೆ. ಅಪ್ಪನ ಜೊತೆ ನೆಂಟರೊಬ್ಬರ ಮನೆಗೆ ಹೋಗಿದ್ದೆ. ಆ ಮನೆ ಯಜಮಾನರು, “ಇವತ್ತು ನನ್ನದೇ ಅಡಿಗೆ ಮಾರ್ರೆ, ನಮ್ಮವರು ಒಳಗಿಲ್ಲ” ಎನ್ನುತ್ತಾ ನಕ್ಕರು.

ಮನೆಯೊಡತಿ ಮನೆಯ ಜಗುಲಿಯಲ್ಲೇ ಒಂದು ಮೂಲೆಯಲ್ಲಿ ಕೂತಿದ್ದರೂ, ಇವರು ಯಾಕೆ ಹೀಗೆ ಹೇಳಿದರು ಎಂದು ನನಗೆ ಅರ್ಥವಾಗದೇ ತಲೆಯೊಳಗೆ ಪ್ರಶ್ನೆಗಳ ಸರಮಾಲೆಯೇ ಉದ್ಭವಿಸಿತು. ನಾವು ಇಡೀ ದಿನ ಅಲ್ಲೇ ಇದ್ದರೂ ಅವರು ಮಾತ್ರ ಒಂದು ಮೂಲೆಯಲ್ಲೇ ಕೂತು ನಮ್ಮೊಂದಿಗೆ ಮಾತನಾಡುತ್ತಿದ್ದರು, ಯಾರನ್ನೂ ಮುಟ್ಟದೇ ದೂರದಿಂದಲೇ ಎಲ್ಲವನ್ನೂ ತೆಗೆದುಕೊಳ್ಳುತ್ತಿದ್ದರು. ನಂಗಂತೂ ಎಲ್ಲವೂ ಆಶ್ಚರ್ಯವೇ. ಅವರ ಮನೆಯಿಂದ ಹೊರಗೆ ಕಾಲಿಟ್ಟ ಕೂಡಲೇ ನಾನು ಅಪ್ಪನತ್ರ ಮೊದಲು ಕೇಳಿದ ಪ್ರಶ್ನೆ “ಅವರ್ಯಾಕೆ ಹಾಗಿದ್ದರು?” ಅಪ್ಪ ಯೋಚಿಸಿ, “ಮುಂದೆ ಎಲ್ಲಾ ತಿಳಿ‌ಯುತ್ತದೆ ನಿಂಗೆ” ಎಂದಷ್ಟೇ ತಣ್ಣಗೆ ಉತ್ತರಿಸಿ ನನ್ನೆಲ್ಲಾ ಕುತೂಹಲಗಳನ್ನೂ ತಣ್ಣಗಾಗಿಸಿದ್ದರು.

ನಾನಾಗ ಆರು ಅಥವಾ ಏಳನೇ ತರಗತಿಯ ಪ್ರಾರಂಭದ ದಿನಗಳಲ್ಲಿದ್ದೆ. ಒಂದು ದಿನ ನನ್ನ ಗೆಳತಿಯೊಬ್ಬಳ ಯೂನಿಫಾರ್ಮ್ ಲಂಗವೆಲ್ಲಾ ಕೆಂಪಾಗಿತ್ತು, ಅದನ್ನು ಗಮನಿಸಿದ ಮೇಡಂ ಅವಳನ್ನು ಮನೆಗೆ ಕಳಿಸಿದ್ದರು. ಅಂದು ಸಂಜೆ ನಂಗೆ ಹೊಟ್ಟೆಯೊಳಗೆಲ್ಲಾ ತಳಮಳ, ಏನೋ ಹೇಳಿಕೊಳ್ಳಲಾಗದ ಅನುಭವ, ಏನೂ ಮಾಡಲೂ ಮನಸ್ಸಿಲ್ಲ‌. ಮೂತ್ರಕ್ಕೆ ಹೋದರೆ ರಕ್ತ! ಏನೂ ಅರಿಯದ ನನಗೆ ಒಂತರಾ ಹೆದರಿಕೆ, ನಂಗೇನೋ‌ ದೊಡ್ಡ ಖಾಯಿಲೆ ಅಂತ ತಲೆಬಿಸಿ ಆಗಿ ಆತಂಕದಲ್ಲೇ ಅಮ್ಮಗೆ ಹೋಗಿ ಹೇಳಿದ್ದೆ. ಅಮ್ಮ ಕಾಟನ್ ಬಟ್ಟೆ ಕೊಟ್ಟು ಎಲ್ಲಾ ವ್ಯವಸ್ಥೆ ಮಾಡಿದ್ದಳು. ಆನಂತರದಲ್ಲಿ ಮುಟ್ಟು ಅಥವಾ ಪಿರಿಯಡ್ಸ್ ನ ಬಗ್ಗೆ ಎಲ್ಲಾ ವಿವರಣೆ ತಿಳಿಸಿದ್ದಳು. ನನಗಂದು ಅವತ್ತಿನ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಉತ್ತರ ತಿಳಿಯುತ್ತಾ “ನಾನಂದು ದೊಡ್ಡವಳಾಗಿದ್ದೆ!”

ತಿಂಗಳಿಂದ ತಿಂಗಳಿಗೆ “ಆ ಮೂರು ದಿನ”ಗಳಲ್ಲಿ ದೈಹಿಕ, ಮಾನಸಿಕ ನೋವುಗಳು ಪ್ರಾರಂಭವಾಯಿತು. ಆ ದಿನಗಳು ಹತ್ತಿರ ಬರುತ್ತಿದ್ದಂತೆ ಸಣ್ಣ ಪುಟ್ಟ ವಿಷಯಗಳಲ್ಲೂ ಕಿರಿಕಿರಿ. ಅಮ್ಮ ಏನಾದ್ರೂ ಹೇಳಿದ್ರೆ ಸಿಟ್ಟು ಬರೋದು, ಯಾರಾದ್ರೂ ಚೂರು ಮಾತಾಡಿದ್ರೂ ಬೇಜಾರಾಗದು ಎಲ್ಲಾ ಮಾಮೂಲಾಯ್ತು. ಆ ಮೂರು ದಿನಗಳಂತೂ ಸಹಿಸಲಸಾಧ್ಯ ಹೊಟ್ಟೆನೋವು. ಅದು ಹೊಟ್ಟೆನೋವೋ, ಸೊಂಟನೋವೋ ಅಥವಾ ಕಾಲುನೋವೋ ಅಥವಾ ಎಲ್ಲದೂ ನೋವೋ ಅಂತನೇ ಅರ್ಥ ಆಗದಂತೆ ನೋವು. ತಲೆನೋವು ಬಂದ್ರೂ ಸಹಿಸಿಕೊಳ್ಳಬಹುದು, ಈ ಹೊಟ್ಟೆನೋವು ಬೇಡ ಎಂಬ ಯೋಚನೆ.

ಕೆಲವೊಂದು‌ ತಿಂಗಳಲ್ಲಂತೂ ಸರಿಯಾದ ಸಮಯಕ್ಕೆ ಮುಟ್ಟಾಗದೇ ನಾಲ್ಕೈದು ದಿನಗಳು ಮುಂದೆ ಹೋದರಂತೂ ಏನೇನೋ ಯೋಚನೆಗಳು ಮನದೊಳಗೆ. ಪ್ರಗ್ನೆಂಟ್ ಆದ್ರೆ ಮುಟ್ಟಾಗಲ್ಲಂತೆ ಅಂತ ಶಾಲೆಯಲ್ಲಿ ಯಾರೋ ಮಾತಾಡ್ತಿದ್ದದ್ದೆಲ್ಲಾ ನೆನಪಾಗಿ, ಯಾವುದೇ ಸಾಧ್ಯತೆಗಳಿಲ್ಲ ಅಂತ ಗೊತ್ತಿದ್ದರೂ ಅಳುಕು. ಯಾರೊಂದಿಗೆ ಹೇಳಿಕೊಳ್ಳಲೂ ಆಗದ ಭಾವ. ಅದಲ್ಲದೇ, ಯಾವುದಾದರೂ ಕಾರ್ಯಕ್ರಮಗಳಿದ್ದಾಗ ಅಥವಾ ಎಲ್ಲಿಗಾದರೂ ಹೊರಟು ನಿಂತಾಗಲೇ ಅಡ್ಡ ಬರೋದು “ಆ ಮೂರು ದಿನಗಳು”.ಇಂತಹ ಸಂಗತಿಗಳು ಇನ್ನೂ ನೂರೆಂಟು ಇವೆ.ಪ್ರತೀ ವಾರ ನಿಮಗೆಲ್ಲಾ ಹೇಳ್ತೇನೆ.ಈ ವಾರಕ್ಕಿಷ್ಟು ಸಾಕು

-ಮಲ್ಲಿಗೆ ಮೊಗ್ಗಿನ ಹುಡುಗಿ