ಈತನ ಕಂಠಸಿರಿ ಕೇಳಿದರೆ ಮೈ ಮನಸ್ಸು ತುಂಬಿಕೊಳ್ಳುತ್ತದೆ, ಇವನ ಹಾಡು ಕೇಳುತ್ತಲೇ ಹೋದಂತೆಲ್ಲ ಕಿವಿಯಲ್ಲಿ ಅದೆಂತದ್ದೋ ರೋಮಾಂಚನ, ನೀವೂ ಝಿ ಕನ್ನಡ ವಾಹಿನಿಯ ಸಂಗೀತ ಕಾರ್ಯಕ್ರಮದಲ್ಲಿ ಈತನ ಸ್ವರ ಕೇಳಿ ಆನಂದದ ಪಟ್ಟಿರುತ್ತೀರಿ, ಅಬ್ಬಾ, ಎಂಥಾ ಹಾಡ್ತಾನೆ ಈ ಹುಡುಗ ಅಂತ ಹುಬ್ಬೇರಿಸಿರುತ್ತೀರಿ. ಸುಮಧುರ ಗಾಯಕ, ಕರಾವಳಿಯ ರಜತ್ ಮಯ್ಯ ಅನ್ನೋ ಯುವಕನ ಬಗ್ಗೆಯೇ ನಾವ್ ಹೇಳ್ತಿರೋದು.
“ರಜತ” ಗಾನ ಮೊಳಗುತಿದೆ:
ರಜತ್ ಮಯ್ಯ ಬೆಳ್ತಂಗಡಿ ತಾಲೂಕಿನ ಉಜಿರೆಯವರು. ಉಜಿರೆಯ ರಮೇಶ್ ಮಯ್ಯ ಹಾಗೂ ಶ್ರೀಮತಿ ಲತಾ ಮಯ್ಯ ಅವರ ಪುತ್ರನಾದ ರಜತ್ ಗೆ ಬಾಲ್ಯದಿಂದಲೂ ರಾಗ, ತಾಳ, ಗಾನದ ಗುಂಗು, ಎದೆಯಲ್ಲೆಲ್ಲಾ ಬರೀ ಸಂಗೀತದ್ದೇ ರಂಗು ಹತ್ತಿಕೊಂಡಿತ್ತು. ಬಳಿಕ ಓದಿನ ಜೊತೆಗೆ ಸಂಗೀತವನ್ನೂ ಧ್ಯಾನಿಸಿದ ರಜತ್, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಮುಗಿಸಿದರು.
ಏಳನೇ ತರಗತಿಯಲ್ಲೇ ಈ ಟಿ.ವಿ.ಯ “ಎದೆತುಂಬಿ ಹಾಡುವೆನು” ಸ್ಪರ್ಧೆಯಲ್ಲಿ, ಕರಾವಳಿಯ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ ಬಾಚಿ, “ವಾಯ್ಸ್ ಆಫ್ ಕರಾವಳಿ”, “ವಾಯ್ಸ್ ಆಫ್ ಉಡುಪಿ”, “ನಮ್ಮ ಸೂಪರ್ ಸಿಂಗರ್”, “ಮಂಗಳೂರು ಐಡಲ್”, “ಕುಂದಾಪುರ ಸ.ರೆ.ಗ.ಮ.ಪ”, ಕಲಾತರಂಗ (ರಿ) ಬಸ್ರೂರು ನಡೆಸಿದ “ಸಂಗೀತ ಸಮರ” ಹೀಗೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ನಿರಂತರವಾಗಿ ಮೂಡಿಸುತ್ತಾ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದಾನೆ ರಜತ್.
ಸರಿಗಮಪ ದಲ್ಲಿ ಮಿಂಚಿದ್ರು:
ಈತ ಒಂದೇ ಉಸಿರಿನಲ್ಲಿ(breath less) ಹಾಡುವ “ಒಂದೇ ಉಸಿರಂತೆ, ಮಹಾಪ್ರಾಣ ದೀಪಂ” ಹಾಡುಗಳಿಗಂತೂ ಮನಸೂರೆಗೊಳ್ಳದವರಿಲ್ಲ. ದೂರದರ್ಶನದಲ್ಲಿ ಪ್ರಸಾರವಾಗುವ “ಮಧುರ ಮಧುರವೀ ಮಂಜುಳಗಾನ” ಎಂಬ ಪ್ರಸಿದ್ಧ ಕಾರ್ಯಕ್ರಮದಲ್ಲೂ ಈತನ ಕಂಠಸಿರಿ ಪ್ರದರ್ಶನ ಕಂಡಿದೆ.
ಇದೀಗ “ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಕಾರ್ಯಕ್ರಮ ಸ. ರಿ. ಗ. ಮ. ಪ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನದೊಂದಿಗೆ ಕರಾವಳಿಯ ಹಿರಿಮೆ ಗರಿಮೆಗಳ ಸುಂದರ ಕಿರೀಟದೊಳು ಮತ್ತೊಂದು ಸುಂದರ ವಜ್ರವಾಗುವತ್ತ ಧಾಪುಗಾಲಿಡುತ್ತಿದ್ದಾನೆ ಈ ಯುವಕ.
ಉಡುಪಿಯಲ್ಲಿ “ಯುವತರಂಗ”ದ ಮೃದಂಗ:
ವಿಭಿನ್ನ ಕಾರ್ಯಕ್ರಮಗಳನ್ನು ನೀಡಬೇಕೆಂಬ ದೃಷ್ಟಿಯಿಂದ ಈತನ ನೇತೃತ್ವದಲ್ಲಿ ಉಡುಪಿಯಲ್ಲಿ ಆರಂಭವಾಗಿರುವ “ಯುವತರಂಗ” ಎಂಬ ತಂಡ 30ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ರಾಜ್ಯದ ವಿವಿಧೆಡೆಗಳಲ್ಲಿ ನೀಡಿದೆ. ಭಾವಗೀತೆ, ಭಕ್ತಿಗೀತೆ, ಚಿತ್ರಗೀತೆ, ಜಾನಪದ ಗೀತೆ, ನೃತ್ಯ, ಹಾಸ್ಯಮಯ ಪ್ರಹಸನಗಳು, ರಾಷ್ಟ್ರಭಕ್ತಿಯನ್ನು ಉತ್ತೇಜಿಸುವ ಹಾಗೂ ದೇಶದ ಸ್ವಾತಂತ್ರ್ಯ ವೀರರನ್ನು, ಸೈನಿಕರನ್ನು ಸ್ಮರಿಸುವ ದೃಷ್ಟಿಯಿಂದ “ವಂದೇಮಾತರಂ” ಎಂಬ ವಿಭಿನ್ನ ಕಾರ್ಯಕ್ರಮವನ್ನೂ ಕೂಡ ಈ ತಂಡ ನೀಡುತ್ತಿದೆ. ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡಿ ವೇದಿಕೆ ಕೂಡ ಒದಗಿಸುತ್ತಿದೆ
ನಿಮ್ಮದ್ದೊಂದು ಪ್ರೀತಿ ಇರಲಿ:
ಎಂತಹ ಪರಿಸ್ಥಿತಿಯೇ ಬಂದರೂ, ಬೇರೆಯವರ ಪ್ರಭಾವದಿಂದ ತಾನು ಮೇಲೆ ಹೋಗುವ ಕನಸೂ ಕಾಣದ, ಸ್ವಪ್ರಯತ್ನದ ಹೊರತು ಮತ್ತಾವುದೇ ಕಾರಣದಿಂದಲೂ ತನ್ನನ್ನು ತಾನು ಗುರುತಿಸಿಕೊಳ್ಳ ಬಯಸದ ರಜತ್, ಕೇವಲ ಪ್ರತಿಭೆಯಿಂದ ಗುರುತಿಸಿಕೊಳ್ಳಬಯಸುವ ವ್ಯಕ್ತಿ. ಪ್ರತಿಸ್ಪರ್ಧಿಯನ್ನು ಪ್ರತಿಸ್ಪರ್ಧಿಯಂತೆ ಕಾಣದೇ ಅವರ ಹಾಡುಗಾರಿಕೆಗೂ ಹುರಿದುಂಬಿಸುವ ಅಪರೂಪದ ಗಾಯಕ ರಜತ್, ಪ್ರಸ್ತುತ ಮೈಸೂರಿನ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯದಲ್ಲಿ ಹಿಂದುಸ್ತಾನೀ ಶಾಸ್ತ್ರೀಯ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನು ಅಭ್ಯಸಿಸುತ್ತಿದ್ದಾರೆ. ಅವರ ಸಂಗೀತದ ಪಯಣಕ್ಕೆ ನಿಮ್ಮದ್ದೊಂದು ಹಾರೈಕೆ ಇರಲೇಬೇಕು. ಕರಾವಳಿಯ ಈ ಹುಡುಗ ಸಂಗೀತ ಲೋಕಕ್ಕೊಂದು ದೊಡ್ಡ ಸ್ವರವಾದರೆ ಅದಕ್ಕಿಂತಲೂ ಖುಷಿ ಬೇರೊಂದಿಲ್ಲ ಅಲ್ಲವೇ, ನಿಮ್ಮೂರಲ್ಲೂ ಒಂದು ಚೆಂದದ ಕಾರ್ಯಕ್ರಮ ನೀಡಲು ರಜತ್ ಅವರ ಸಂಪರ್ಕ:8197495429