ಸಂಗೀತ ಪ್ರದರ್ಶನ ನೀಡುತ್ತಲೇ ಪ್ರಾಣ ತ್ಯಜಿಸಿದ ಖ್ಯಾತ ಗಾಯಕ ಕೆ.ಕೆ

ಕೋಲ್ಕತ್ತಾ: ಗಾಯಕ-ಸಂಯೋಜಕ ಕೆಕೆ (ಕೃಷ್ಣಕುಮಾರ್ ಕುನ್ನತ್) ಮಂಗಳವಾರ ತಮ್ಮ 53 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಎರಡು ದಿನಗಳ ಸಂಗೀತ ಕಚೇರಿಗಾಗಿ ಕೋಲ್ಕತ್ತಾದಲ್ಲಿದ್ದರು. ಇಲ್ಲಿನ ನಜ್ರುಲ್ ಮಂಚದಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ ಕೆ.ಕೆ ಅವರನ್ನು ಸಿ ಎಂ ಆರ್ ಐ ಆಸ್ಪತ್ರೆಗೆ ಸಾಗಿಸಲಾಗಿತ್ತು.

ರಾತ್ರಿ 10 ಗಂಟೆ ಸುಮಾರಿಗೆ ಅವರನ್ನು ಆಸ್ಪತ್ರೆಗೆ ಕರೆತರುವಾಗಲೆ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಅವರು ಶಂಕಿತ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸಿಎಂಆರ್‌ಐ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಸಂಗೀತ ಕಾರ್ಯಕ್ರಮ ನೀಡುತ್ತಿದ್ದ ವೇಳೆ ಕೆಕೆ ಅಸ್ವಸ್ಥಗೊಂಡಿದ್ದರು, ಮಧ್ಯಂತರದಲ್ಲಿ ತಮ್ಮ ಅಸ್ವಸ್ಥತೆಯ ಬಗ್ಗೆ ಹೇಳಿಕೊಂಡಿದ್ದರೂ ಕಾರ್ಯಕ್ರಮದ ಕೊನೆಯವರೆಗೂ ನಿಂತು ಪ್ರದರ್ಶನ ನೀಡಿದ್ದರು. ನಂತರ, ಅವರನ್ನು ಅವರು ತಂಗಿದ್ದ ಎಸ್ಪ್ಲಾನೇಡ್‌ನಲ್ಲಿರುವ ಪಂಚತಾರಾ ಹೋಟೆಲ್‌ಗೆ ಕರೆದೊಯ್ಯಲಾಗಿತ್ತು, ಅಲ್ಲಿ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು ಮತ್ತು ಅವರು ಆಸ್ಪತ್ರೆಗೆ ತಲುಪುವ ಮೊದಲೇ ಅವರು ನಿಧನರಾಗಿದ್ದರು.

ಕೆಕೆ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಕುಟುಂಬಿಕರಿಗೆ ಸುದ್ದಿ ತಿಳಿಸಿದ್ದು, ಬುಧವಾರ ಮುಂಜಾನೆ ಅವರು ಕೋಲ್ಕತ್ತಾ ತಲುಪಲಿದ್ದಾರೆ ಎನ್ನಲಾಗಿದೆ.

ಸಂಗೀತ ಮಾಂತ್ರಿಕನ ಸಾವಿಗೆ ಪ್ರಧಾನಿ ಮೋದಿ ಸಹಿತ ಗಣ್ಯರು ಮತ್ತು ದೇಶದ ಜನತೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.