ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳಿಂದ ರಾಜ್ಯದ 63 ಕಡೆಗಳಲ್ಲಿ ದಾಳಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ, ಲಂಚಕ್ಕೆ ಬೇಡಿಕೆಯ ದೂರುಗಳು ಬಂದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಹದಿಮೂರು ಅಧಿಕಾರಿಗಳ ಮನೆಗಳು, ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ಮಾಡಿದೆ.ರಾಜ್ಯದ 63 ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿದೆ.ಅಕ್ರಮ ಆಸ್ತಿಗಳಿಕೆಯ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು ಸೇರಿ ರಾಜ್ಯದ 63 ಕಡೆ ದಾಳಿ ಮಾಡಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬೆಂಗಳೂರಿನ 3 ಕಡೆ ದಾಳಿ: ಬೆಂಗಳೂರಿನಲ್ಲಿ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಸ್ಕಾಂ ಜಾಗೃತ ದಳದ ಅಧಿಕಾರಿ ಟಿ.ಎನ್.ಸುಧಾಕರ್ ರೆಡ್ಡಿ ಮನೆ, ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್​​​.ಎಸ್.ಕೃಷ್ಣಮೂರ್ತಿ ಮನೆ ಸೇರಿದಂತೆ ಮೂರು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿವೆ.

ಕೋಲಾರ, ಬೆಂಗಳೂರು ಬೆಳಗಾವಿ ಸೇರಿ ಹತ್ತು ಕಡೆಗಳಲ್ಲಿ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳಿಗೆ, ಹುಟ್ಟೂರು ಮಹದೇವಪುರದಲ್ಲಿ ಮೂರು ಹಂತಸ್ತಿನ ಐಷಾರಾಮಿ ಮನೆ ಸೇರಿದಂತೆ ಜಮೀನು ಪತ್ರಗಳು ಸಿಕ್ಕಿದೆ. ಲೋಕಾಯುಕ್ತ ಎಸ್ಪಿ ಉಮೇಶ್​ ಅವರ ನೇತೃತ್ವದಲ್ಲಿ ದಾಳಿ ಮಾಡಿದ್ದು ದಾಖಲೆಗಳ‌ ಪರಿಶೀಲನೆಯಲ್ಲಿ ಸದ್ಯ ಅಧಿಕಾರಿಗಳು ತೊಡಗಿದ್ದಾರೆ.ಕೋಲಾರದಲ್ಲಿ ಅಧಿಕಾರಿಗಳಿಂದ ಶೋಧ: ಕ್ರೆಡಿಲ್ ಸೂಪರಿಡೆಂಟ್ ಇಂಜಿನಿಯರ್​ ಆಗಿರುವ ತಿಮ್ಮರಾಯಪ್ಪ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಳು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ತಿಮ್ಮರಾಯಪ್ಪ ಪ್ರಸ್ತುತ ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಮಹದೇವಪುರ ಹುಟ್ಟೂರಿನ ಮನೆ ಮೇಲೆ ಸೇರಿದಂತೆ, ತಿಮ್ಮರಾಯಪ್ಪ ಅವರಿಗೆ ಸೇರಿದ ಎಂಟು ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬಳ್ಳಾರಿ – ವಿಜಯನಗರದಲ್ಲೂ ಕಾರ್ಯಚರಣೆ: ಬಳ್ಳಾರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಚಂದ್ರಶೇಖರ, ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ ಮಾರುತಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್​ ಅವರ ಹೊಸಪೇಟೆಯ ಮನೆ, ಗಂಗಾವತಿಯಲ್ಲಿ ಅರಣ್ಯ ಇಲಾಖೆಯ ಡಿಆರ್​ಎಫ್‌ಒ ಆಗಿರುವ ಮಾರುತಿ ಅವರ ಕಂಪ್ಲಿಯ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಬೀದರ್​-ಕಲಬುರಗಿಯಲ್ಲಿ ಲೋಕಾಯುಕ್ತ ದಾಳಿ: ಬೀದರ್​​ನಲ್ಲಿಯೂ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಬೀದರ್ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ನೌಕರ ಸುನೀಲ್ ಕುಮಾರ್ ಮನೆ ಹಾಗೂ ಕಾಂಪ್ಲೆಕ್ಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇನ್ನು ಯಾದಗಿರಿಯ ಡಿಎಚ್​ಓ ಡಾ ಪ್ರಭುಲಿಂಗ ಮಾನಕರ್ ಅವರ ಕಲಬುರಗಿ ನಗರದ ಕರುಣೇಶ್ವರ ಕಾಲೋನಿಯಲ್ಲಿರುವ ನಿವಾಸದಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು ಕಡತಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮೈಸೂರಿನಲ್ಲಿ ದಾಳಿ: ಮೈಸೂರಿನ ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿಗೆ ಸಂಬಂಧಿಸಿದ ಸ್ಥಳಗಳಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೈಸೂರಿನ ಗುರುಕುಲ ಬಡಾವಣೆ ನಿವಾಸ ಸೇರಿ 12 ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್, ಐಜಿಪಿ ಸುಬ್ರಮಣ್ಯೇಶ್ವರ ರಾವ್, ಎಸ್. ಪಿ ಸುರೇಶ್ ಬಾಬು ಮಾರ್ಗದರ್ಶ‌ನದಲ್ಲಿ ಡಿಎಸ್‌ಪಿ, ಕೃಷ್ಣಯ್ಯ ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿದೆ