ಉಡುಪಿ: ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಮಿತಿಮೀರಿತ್ತು. ಅವರು ಐದು ವರ್ಷ ವರ್ಷಗಳ ಕಾಲ ಸರಕಾರ ನಡೆಸಿದ್ದೆ ಡ್ರಗ್ಸ್ ಮಾಫಿಯಾದಿಂದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ಅಂಬಾಗಿಲು ಅಮೃತ್ ಗಾರ್ಡನ್‌ನಲ್ಲಿ ಆಯೋಜಿಸಲಾದ ಗ್ರಾಮ ಸ್ವರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಡ್ರಗ್ಸ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಮೂಲಕ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ಹೊರಟಿದ್ದಾರೆ. ಲವ್ ಜಿಹಾದ್ ವಿರುದ್ಧ ಸರಕಾರ ಕಠಿಣ ಕಾನೂನು ತರಲು ತೀರ್ಮಾನ ಮಾಡಿದೆ. ಮುಂದಿನ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲಾಗುವುದು ಎಂದರು. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಸಾಕಷ್ಟು ಮಂದಿ ಸಂಘಪರಿವಾರದ ಕಾರ್ಯಕರ್ತರು ಹಾಗೂ ಮುಖಂಡರ ಹತ್ಯೆಗಳು ನಡೆದಿದ್ದವು. ಆದರೆ ನಮ್ಮ ಸರಕಾರದ ಈ ಒಂದೂವರೆ ಅವಧಿಯಲ್ಲಿ ಒಂದೇ ಒಂದು ಮತೀಯ ಗಲಭೆಗಳು ಮತ್ತು ಹತ್ಯೆಗಳು ನಡೆದಿಲ್ಲ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ಸಂಸದರಾದ ಮುನಿಸ್ವಾಮಿ, ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್,ಮುಲ್ಕಿ ಮೂಡಬಿದ್ರೆ ಶಾಸಕ ಉಮನಾಥ್ ಕೋಟ್ಯಾನ್, ಮುಖಂಡರಾದ ಮಹೇಶ್ ತೆಂಗಿನಕಾಯಿ, ಮಟ್ಟಾರು ರತ್ನಾಕರ ಹೆಗ್ಡೆ, ದಿನಕರ ಬಾಬು, ಗೀತಾ ವಿವೇಕಾನಂದ, ಉದಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಅಧ್ಯಕ್ಷೆ ಮಹೇಶ್ ಠಾಕೂರ್ ಸ್ವಾಗತಿಸಿದರು. ಕುತ್ಯಾರು ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.