ಬೆಂಗಳೂರು: ಕಳೆದ ಮೂರು ವರ್ಷಗಳಿಂದ ರಾಜ್ಯದ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನ ಬದಲಾವಣೆ ಕುರಿತ ರಾಜಕೀಯ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಗುರುವಾರ (ಮೇ 28) ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ. ಈ ಶುಕ್ರವಾರ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಿಸುವ ನಿರೀಕ್ಷೆ ಇದೆ
ದೆಹಲಿ ಹೈಕಮಾಂಡ್ ಸಭೆಯ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಶುಕ್ರವಾರ (ಮೇ 29) Indian National Congress ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆ ಇದೆ. ಈ ಸಭೆಯಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯಬಹುದು ಎನ್ನಲಾಗಿದೆ. ರಾಜ್ಯಕ್ಕೆ ಇಂದು ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸುರ್ಜೇವಾಲಾ ಆಗಮಿಸಲಿದ್ದು, ಶಾಸಕರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ನಡುವೆ ಡಿಕೆಶಿವಕುಮಾರ್ DK Shivakumar ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಹೊಸ ನಾಯಕನಾಗಿ ಆಯ್ಕೆ ಮಾಡುವ ಬಗ್ಗೆ ಪಕ್ಷದೊಳಗೆ ಚರ್ಚೆಗಳು ಜೋರಾಗಿವೆ ಎನ್ನಲಾಗುತ್ತಿದೆ. ಶಾಸಕರಿಗೆ ನಾಯಕತ್ವ ಬದಲಾವಣೆಯ ಅಗತ್ಯವನ್ನು ಮನವರಿಕೆ ಮಾಡುವ ಪ್ರಯತ್ನ ನಡೆಯುವ ಸಾಧ್ಯತೆಯೂ ಇದೆ.
ನಾಳೆ ಬೆಳಗ್ಗೆ ಸಚಿವರ ಉಪಹಾರ ಸಭೆ ನಡೆಯಲಿದ್ದು, ಅದರ ಬಳಿಕ ಸಿದ್ದರಾಮಯ್ಯ ಅವರು ರಾಜೀನಾಮೆ ಸಲ್ಲಿಸಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ನಂತರ ಡಿಕೆ ಶಿವಕುಮಾರ್ ರಾಜ್ಯಪಾಲರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಭೇಟಿಯ ಬಳಿಕ ರಾಜ್ಯದ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ.
ಇದರ ನಡುವೆಯೇ ಡಿಕೆ ಶಿವಕುಮಾರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ದೆಹಲಿಯಲ್ಲಿ ತಂಗಿದ್ದು, ಪಕ್ಷದ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. Mallikarjun Kharge ಅವರೊಂದಿಗೆ ನಡೆಯಲಿರುವ ಸಭೆಯಲ್ಲಿ ಸರ್ಕಾರ ಮತ್ತು ಪಕ್ಷದ ಮುಂದಿನ ದಿಕ್ಕು ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಪಕ್ಷದ ಒಳಒಗ್ಗಟ್ಟು ಕಾಪಾಡುವುದು, ಗುಂಪು ರಾಜಕೀಯ ತಪ್ಪಿಸುವುದು ಹಾಗೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಗುವ ಕುರಿತು ಹಿರಿಯ ನಾಯಕರು ಮಾರ್ಗದರ್ಶನ ನೀಡಬಹುದು ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿವೆ.

















