ಉಡುಪಿ: ಸಿದ್ದರಾಮಯ್ಯನವರು ಮೊದಲು ತಮ್ಮ ವಿಪಕ್ಷ ನಾಯಕ ಸ್ಥಾನ ಭದ್ರಪಡಿಸಿಕೊಳ್ಳಲಿ. ಆ ಬಳಿಕ ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಉಡುಪಿಯ ಮಣಿಪಾಲ್ ಇನ್ ಹೋಟೆಲ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯ ಬಳಿಕ ಸಿಎಂ ಬದಲಾಗುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ಡಿ.ಕೆ. ಶಿವಕುಮಾರ್ ವಿಪಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಸಿದ್ದರಾಮಯ್ಯನವರ ಸ್ಥಾನ ಯಾವಾಗ ಬೇಕಾದ್ರೂ ಹೋಗಬಹುದು. ಹಾಗಾಗಿ ಟೀಕೆ ಮಾಡುವ ಬದಲು ತಮ್ಮ ಸ್ಥಾನ ಉಳಿಸಿಕೊಳ್ಳುವಂತಾ ಪ್ರಯತ್ನ ಮಾಡಲಿ ಎಂದು ಸಲಹೆ ನೀಡಿದರು.
ಬಿಜೆಪಿ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳಿಂದ ಕಾಂಗ್ರೆಸ್ ಕಂಗಾಲಾಗಿದೆ. ಹೀಗಾಗಿ ಸರ್ಕಾರದ ಮೇಲೆ ವಿನಾ ಕಾರಣ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಅವರ ಹೋರಾಟ ಏನಿದ್ರೂ ಕೇವಲ ಟ್ವೀಟ್ ಗೆ ಸೀಮಿತವಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ನವರಿಗೆ ಯಾವುದನ್ನು ವಿರೋಧಿಸಬೇಕು ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲ. ಕೋವಿಡ್ ಲಸಿಕೆ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರಪಂಚವೇ ತಿರುಗಿ ನೋಡುವ ರೀತಿಯಲ್ಲಿ ಕೊರೊನಾ ನಿಯಂತ್ರಿಸಿದ್ದಾರೆ. ಕರ್ನಾಟಕ ಸರ್ಕಾರ ಕೋವಿಡ್ ನಿಯಂತ್ರಿಸಯವಲ್ಲಿ ಯಶಸ್ವಿಯಾಗಿದೆ. ಇದನ್ನು ನೋಡಿ ಸಹಿಸಲಾಗದೆ ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತೆ ಅಧಿಕಾರದ ಕನಸು ಕಾಣುತ್ತಿದ್ದಾರೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ₹300 ಕೋಟಿ ವೆಚ್ಚದಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸಲಾಗುವುದು. ಈ ಕಾರ್ಯಕ್ಕೆ ಜಿಲ್ಲಾವಾರು ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ. ಟೆಂಡರ್ ಪಡೆದ ಕಂಪನಿಗಳಿಗೆ 5 ವರ್ಷಗಳ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ ಎಂದರು.
ಗ್ರಾಮ ಪಂಚಾಯಿತಿಗಳಲ್ಲಿ ಸೋಲಾರ್ ವ್ಯವಸ್ಥೆ ಜಾರಿಯಾದರೆ ವಿದ್ಯುತ್ ಬಿಲ್ ಪಾವತಿ ಸಮಸ್ಯೆ ನಿವಾರಣೆಯಾಗಲಿದೆ. ಪಂಚಾಯಿತಿ ಸದಸ್ಯರ ಗೌರವಧನವನ್ನು 1 ಸಾವಿರದಿಂದ 2 ಸಾವಿರಕ್ಕೆ ಹೆಚ್ಚಳ ಮಾಡುವ ಸಂಬಂಧ ಪ್ರಸ್ತಾವವನ್ನು ಪರಿಶೀಲಿಸಲಾಗುವುದು ಎಂದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಇದ್ದರು.