ತೆಂಕುತಿಟ್ಟು ಯಕ್ಷಗಾನದ ಖ್ಯಾತ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ನಿಧನ.

ಬಂಟ್ವಾಳ: ತಾಲೂಕಿನ ಸಂಗಬೆಟ್ಟು ಗ್ರಾಮದ ಮಂಚಕಲ್ಲು ನಿವಾಸಿ, ಹನುಮಗಿರಿ ಮೇಳದ ಹಿರಿ ಕಲಾವಿದ, ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ (60) ಅವರು ಜು.20 ರಂದು ಮಧ್ಯಾಹ್ನ ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಕಟೀಲು 2ನೇ ಮೇಳದಲ್ಲಿ 2 ವರ್ಷ ನೇಪಥ್ಯ ಕಲಾವಿದರಾಗಿ ತಿರುಗಾಟ ಆರಂಭಿಸಿದ ಅವರು ಧರ್ಮಸ್ಥಳ ಮೇಳದಲ್ಲಿ 13 ವರ್ಷ ಹಾಗೂ ಕಟೀಲು 1ನೇ ಮೇಳದಲ್ಲಿ 8 ವರ್ಷ ಬಣ್ಣದ ವೇಷಧಾರಿಯಾಗಿ ತಿರುಗಾಟದಲ್ಲಿ ಪಾಲ್ಗೊಂಡಿದ್ದರು. ಹೊಸನಗರ, ಎಡನೀರು ಮತ್ತು ಹನುಮಗಿರಿ ಮೇಳಗಳಲ್ಲೂ ಪಾತ್ರ ಮಾಡಿದ್ದು ಈ ವರ್ಷ ನಿವೃತ್ತರಾಗಿದ್ದರು.

ಆಂಧ್ರಪ್ರದೇಶ, ತಮಿಳುನಾಡು, ದೆಹಲಿ, ಕೇರಳ, ಉತ್ತರ ಪ್ರದೇಶದ ಅಯೋಧ್ಯೆ, ಕಾಶಿ, ಪಶ್ಚಿಮ ಬಂಗಾಳದ ಕೋಲ್ಕತ್ತ, ಉತ್ತರಾಖಂಡದ ಹರಿದ್ವಾರ ಮೊದಲಾದ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.

ಸಿದ್ದಕಟ್ಟೆಯಲ್ಲಿ 1965ರ ಡಿ.17ರಂದು ಜನಿಸಿದ ಸದಾಶಿವ ಅವರ ತಂದೆ ಬಾಬು ಶೆಟ್ಟಿಗಾರ್, ತಾಯಿ ಗಿರಿಯಮ್ಮ. ಸಿದ್ಧಕಟ್ಟೆ ಸೇಂಟ್‌ ಪ್ಯಾಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯ ವರೆಗೆ ಓದಿದ ಅವರಿಗೆ ಯಕ್ಷಗಾನ ಗುರುಗಳಾಗಿದ್ದವರು ರೆಂಜಾಳ ರಾಮಕೃಷ್ಣ ರಾವ್ ಮತ್ತು ಬಣ್ಣದ ಮಹಾಲಿಂಗ ಅವರು. ರಂಗಮಾಹಿತಿ ಮತ್ತು ಹೆಚ್ಚಿನ ಕಲಿಕೆಗೆ ಇರಾ ಗೋಪಾಲಕೃಷ್ಣ ಭಾಗವತ, ಸುಣ್ಣಂಬಳ ವಿಶ್ವೇಶ್ವರ ಭಟ್, ಬೆಳ್ಳಾರೆ ಮಂಜುನಾಥ ಭಟ್ ಮತ್ತಿತರರನ್ನು ಆಶ್ರಯಿಸಿದರು. ಗುರುಗಳಾಗಿ ಸತೀಶ ನೈನಾಡು, ಶಬರೀಶ ಮಾನ್ಯ, ಮನೀಷ್ ಪಾಟಾಳಿ, ಮಧುರಾಜ್ ಪಾಟಾಳಿ, ಸುಬ್ರಹ್ಮಣ್ಯ ಭಟ್ ಬದಿಯಡ್ಕ, ಸಚಿನ್ ಪಾಟಾಳಿ, ಶ್ರೀಶ ಮಾಣಿಲ, ರಂಜಿತ್ ಗೋಳಿಯಡ್ಕ ಮೊದಲಾದವರಿಗೆ ಸದಾಶಿವ ಶೆಟ್ಟಿಗಾರರು ಕಲೆಯನ್ನು ಕಲಿಸಿದ್ದಾರೆ.

ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಮಂಗಳ ಪ್ರಶಸ್ತಿ ಸ್ವೀಕರಿಸಿದ್ದ ಅವರು ಪೇಜಾವರ ಶ್ರೀಗಳ ಜನುಮದಿನದ ಅಂಗವಾಗಿ ನೀಡುವ ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಅರಸಂಕಲ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.