ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಕೋವಿಡ್ ಸೋಂಕು ಕಂಡುಬಂದಲ್ಲಿ ಆ ವಿದ್ಯಾರ್ಥಿಗಳಿಗೆ ಮಾತ್ರ ರಜೆ ನೀಡಬೇಕು. ಒಂದು ವೇಳೆ 10ಕ್ಕಿಂತ ಹೆಚ್ಚು ಮಕ್ಕಳಲ್ಲಿ ಸೋಂಕು ಕಂಡುಬಂದರೆ ತಕ್ಷಣ ಇಡೀ ಶಾಲೆಗೆ ಮುಂದಿನ 2-3 ದಿನ ರಜೆ ಘೋಷಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಎಲ್ಲಾ ಶಾಲೆಗಳಿಗೆ ಸೂಚನೆ ನೀಡಿದೆ.
ಶಾಲಾ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಮಾರ್ಗಸೂಚಿ ರೂಪಿಸಿ ಸುತ್ತೋಲೆ ಹೊರಡಿಸಿರುವ ಇಲಾಖೆಯು, ಪ್ರತಿ ಶಾಲೆಯಲ್ಲೂ ಇವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಅನುಷ್ಠಾನಕ್ಕೆ ಕ್ರಮ ವಹಿಸಬೇಕೆಂದು ಹೇಳಿದೆ.
ಶಾಲೆಯಲ್ಲಿ ಮಕ್ಕಳಿಗೆ ಕೋವಿಡ್ ಲಕ್ಷಣಗಳು ಕಂಡುಬಂದರೆ ಪೋಷಕರ ಉಪಸ್ಥಿತಿಯಲ್ಲಿ ಆರೋಗ್ಯ ಇಲಾಖೆಯ ಸ್ಥಳೀಯ ಆಸ್ಪತ್ರೆಗಳಲ್ಲಿ ತಪಾಸಣೆ ನಡೆಸಬೇಕು. ಸೋಂಕು ದೃಢಪಟ್ಟರೆ ಅವರಿಗೆ ಕೆಲ ದಿನಗಳ ಕಾಲ ಭೌತಿಕ ತರಗತಿಗೆ ಬರದಂತೆ ರಜೆ ನೀಡಿ ಸೂಕ್ತ ಚಿಕಿತ್ಸೆಗೆ ಮಾರ್ಗದರ್ಶನ ನೀಡಬೇಕು. ಒಂದು ವೇಳೆ ಯಾವುದೇ ಶಾಲೆಯಲ್ಲಿ 10ಕ್ಕಿಂತ ಹೆಚ್ಚಿನ ಮಕ್ಕಳಿಗೆ ಕೋವಿಡ್ ಸೋಂಕು ಲಕ್ಷಣ ಕಂಡು ಬಂದಲ್ಲಿ ಅಥವಾ ಸೋಂಕು ದೃಢಪಟ್ಟಲ್ಲಿ, ಆ ಶಾಲಾ ಮುಖ್ಯೋಪಾಧ್ಯಾಯರು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಉಪನಿರ್ದೇಶಕರ ಅನುಮತಿ ಪಡೆದು ಮುಂದಿನ ಎರಡು ಮೂರು ದಿನ ಶಾಲೆಗೆ ರಜೆ ಘೋಷಿಸಬೇಕು ಎಂದಿದೆ.
ರಜೆ ನೀಡಲಾದ ಶಾಲೆಗಳನ್ನು ಆರೋಗ್ಯ ಇಲಾಖೆಯ ಸ್ಥಳೀಯ ಸಿಬ್ಬಂದಿ ಘಟಕ ಯಾ ಜಿಲ್ಲಾಡಳಿತದ ಮೂಲಕ ಸಂಪೂರ್ಣ ಸ್ಯಾನಿಟೈಸ್ ಮಾಡಿಸುವುದು ಸೇರಿದಂತೆ ಅಗತ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ರಜಾ ದಿನಗಳಲ್ಲಿ ನಡೆಯಬೇಕಿದ್ದ ಪಾಠ ಪ್ರವಚನಗಳನ್ನು ಮುಂದಿನ ಸರ್ಕಾರಿ ರಜಾ ದಿನಗಳಲ್ಲಿ ಸರಿದೂಗಿಸಬೇಕು ಎಂದು ಸುತ್ತೋಲೆ ತಿಳಿಸಿದೆ.












