ಭಾರತ-ಪಾಕ್ ನಿಯಂತ್ರಣ ರೇಖೆಯ ತೀತ್ವಾಲ್ ನಲ್ಲಿ ತಾಯಿ ಶಾರದಾಂಬೆಗೆ ಪ್ರಾಣ ಪ್ರತಿಷ್ಠೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಭಕ್ತರು

ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ತೀತ್ವಾಲ್‌ ನಲ್ಲಿ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಜೂ.5ರಂದು ಶ್ರೀ ಶಾರದಾಂಬೆ ವಿಗ್ರಹವನ್ನು ವೇದ ಮಂತ್ರ ಘೋಷಗಳೊಂದಿಗೆ ವಿಧಿವತ್ತಾಗಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಸಿದರು.

ಕಳೆದ ಮಾ.22ರಂದು ಕಾಶ್ಮೀರಿ ಪಂಡಿತರು ಶೃಂಗೇರಿಯಿಂದ ಕೊಂಡೊಯ್ದ ಪಂಚಲೋಹದ ವಿಗ್ರಹವನ್ನು ಜಮ್ಮು ಮತ್ತು ಕಾಶ್ಮೀರದ ತೀತ್ವಾಲ್‌ನಲ್ಲಿ ಪ್ರತಿಷ್ಠಾಪಿಸಿದ್ದರು. ಇದೀಗ ಶ್ರೀ ಶಾರದಾ ಪೀಠದ ಜಗದ್ಗುರುಗಳು ಕಾಶ್ಮೀರದ ತೀತ್ವಾಲ್ ಗೆ ತೆರಳಿ ಪೂಜೆ ಸಲ್ಲಿಸಿ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದಾರೆ.

ಭಾರತ-ಪಾಕಿಸ್ಥಾನ ನಿಯಂತ್ರಣ ರೇಖೆಯ ಕುಪ್ವಾರ ಜಿಲ್ಲೆಯ ತೀತ್ವಾಲ್‌ ನಲ್ಲಿ ಶೃಂಗೇರಿ ಶಾರದಾ ಮಂದಿರವನ್ನು ನಿರ್ಮಿಸಲಾಗಿದ್ದು, ಶ್ರೀನಗರದಲ್ಲಿರುವ ಶೃಂಗೇರಿಯ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ 37ನೇ ಮುಖ್ಯಸ್ಥ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರು ದೇವಿಯ ಪ್ರಾಣ ಪ್ರತಿಷ್ಠಾ ಕಾರ್ಯ ನೆರವೇರಿಸಿದರು.

ಕಾರ್ಯಕ್ರಮಕ್ಕೂ ಮುನ್ನಾದಿನ ಭಾನುವಾರದಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜಗದ್ಗುರುಗಳಿಗೆ ನಮನ ಸಲ್ಲಿಸಿದರು.

Image