ಉಡುಪಿ: ಪ್ರತಿವರ್ಷದಂತೆ ಈ ಬಾರಿಯು ರವಿ ಕಟಪಾಡಿ ಅವರು ಶ್ರೀಕೃಷ್ಣ ಜನ್ಮಾಷ್ಟಮಿಗೆ ವಿಶಿಷ್ಟ ರೀತಿಯ ವೇಷ ಧರಿಸಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಬಡ ಅನಾರೋಗ್ಯ ಪೀಡಿತ ಮಕ್ಕಳಿಗೆ ನೀಡಲು ಉದ್ದೇಶಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಸಂಗ್ರಹಿಸಿದ ಒಟ್ಟು 35ಲಕ್ಷ ರೂ. ಹಣವನ್ನು 29 ಬಡ ಮಕ್ಕಳ ಚಿಕಿತ್ಸೆಗೆ ನೀಡಲಾಗಿದೆ. ಅದೇ ರೀತಿ ಈ ವರ್ಷವೂ ಕೂಡ ರವಿ ಮತ್ತು ಫ್ರೆಂಡ್ಸ್ ಕಟಪಾಡಿ ತಂಡ ಆ ಕಾರ್ಯಕ್ಕೆ ಮುಂದಾಗಿದೆ ಎಂದು ಬುಧವಾರ ಮಹೇಶ್ ಶೆಣೈ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲೀವರ್ ಕ್ಯಾನ್ಸರ್ನಿಂದ ಬಳಲುತ್ತಿರುವ ಮಂದರ್ತಿ ಮೂಡುಬಾರಳಿಯ ಕುಶಲ ಮತ್ತು ಉಷಾ ದಂಪತಿಯ ಮಗ ಶ್ರೀತನ್(3), ಬಳಿರಕ್ತ ಕಣ ಉತ್ಪತ್ತಿ ಯಾಗದ ಕಾಯಿಲೆಯಿಂದ ಬಳಲುತ್ತಿರುವ ಕುಂದಾಪುರ ವಕ್ವಾಡಿಯ ರವೀಂದ್ರ ಮತ್ತು ಯಶೋಧ ದಂಪತಿಯ ಮಗ ಪ್ರಥಮ್(5), ಮೆದಳಿನ ರಕ್ತಸ್ರಾವ ಕಾಯಿಲೆಗೆ ತುತ್ತಾಗಿರುವ ಹಿರಿಯಡಕ ಪಂಚನಬೆಟ್ಟು ಕೃಷ್ಣಮೂರ್ತಿ ಆಚಾರ್ಯ ಮತ್ತು ಕುಶಲ ದಂಪತಿಯ ಮಗ ಕಿರಣ್(18) ಸೇರಿದಂತೆ ಐದು ಮಕ್ಕಳ ಚಿಕಿತ್ಸೆ ಸಹಾಯ ಮಾಡಲಾಗುತ್ತದೆ. ಸಂಗ್ರಹವಾದ ಹಣವನ್ನು ಸೆ.3ರಂದು ಸಂಜೆ 5ಗಂಟೆಗೆ ಕಟಪಾಡಿ ಸಾರ್ವ ಜನಿಕ ಶ್ರೀಗಣೇಶೋತ್ಸವ ವೇದಿಕೆಯಲ್ಲಿ ಶ್ರೀಈಶ ವಿಠಲದಾಸ ಸ್ವಾಮೀಜಿ ಕೇಮಾರು, ಎಸ್ಪಿ ನಿಶಾ ಜೇಮ್ಸ್ ಸಮ್ಮುಖದಲ್ಲಿ ಫಲಾನುಭವಿಗಳಿಗೆ ನೀಡಲಾಗುವುದು.
ಧನ ಸಹಾಯ ಮಾಡಲು ಇಚ್ಛಿಸುವವರು ಪಾಂಗಾಳ ವಿಜಯ ಬ್ಯಾಂಕ್ ಎಸ್ಬಿ ಖಾತೆ ಸಂಖ್ಯೆ 117201011001056(ಐಎಫ್ ಎಸ್ಸಿ ಕೋಡ್: ವಿಐಜೆಬಿ0001172)ಗೆ ಜಮಾ ಮಾಡಬೇಕು. ಈಗಾಗಲೇ ಸಾಮಾಜಿಕ ಜಾಲತಾಣಗಳಿಂದಾಗಿ ಇವರ ಖಾತೆಗೆ ಒಂದು ಲಕ್ಷ ರೂ. ಹಣ ಜಮೆ ಆಗಿದೆ ಎಂದು ಅವರು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ರವಿ ಕಟಪಾಡಿ, ಸಂತೋಷ್, ರಕ್ಷಿತ್, ಅಕ್ವಿಲ್ ಉಪಸ್ಥಿತರಿದ್ದರು.