ಐಪಿಎಲ್​ ಫೈನಲ್​ನಲ್ಲಿ ಧೋನಿಯಿಂದ ವಿಕೆಟ್​ ಕೀಪಿಂಗ್​ ಸಲಹೆ ಪಡೆದಿದ್ದೆ ಎಂದ ಶ್ರೀಕರ್​ ಭರತ್​

ಭಾರತದ ಉದಯೋನ್ಮುಖ ಕ್ರಿಕೆಟ್ ಆಟಗಾರ, ವಿಕೆಟ್​ ಕೀಪರ್​ ಶ್ರೀಕರ್​ ಭರತ್ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಲು ಧೋನಿಯಿಂದ ಸಲಹೆ ಪಡೆದಿದ್ದೇನೆ ಎಂದಿದ್ದಾರೆ. ಐಪಿಎಲ್​ ಫೈನಲ್​ನಲ್ಲಿ ಧೋನಿ ಅವರೊಂದಿಗೆ ಮಾತನಾಡಿ ಕೀಪಿಂಗ್​ ಸಲಹೆಗಳನ್ನು ತೆಗೆದುಕೊಂಡಿದ್ದೇನೆ ಎಂದು ಭರತ್​ ಐಸಿಸಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಭಾರತದ ಮಾಜಿ ನಾಯಕ ಧೋನಿ ನಾಯಕರಾಗಿ ಎಷ್ಟು ಯಶಸ್ವಿಯೋ ಅದರ ಎರಡು ಪಟ್ಟು ವಿಕೆಟ್​ ಕೀಪಿಂಗ್​ನಲ್ಲಿ ಯಶ ಸಾಧಿಸಿದ್ದಾರೆ. ​41 ವರ್ಷದ ಮಾಹಿ ವಿಕೆಟ್​ ಹಿಂದೆ ಈಗಲೂ ಪಾದರಸದಂತೆ ಚುರುಕು. ಬ್ಯಾಟರ್​ ಒಂದು ಕ್ಷಣ ಕಾಲನ್ನು ಕ್ರೀಸ್​ನಿಂದ ಹೊರಗಿಟ್ಟರೆ ಸ್ಟಂಪ್​ ಮಾಡಿ ಔಟ್‌ ಮಾಡುವಷ್ಟು ಚತುರ ಈ ಧೋನಿ. ಇದಕ್ಕೆ ಸಾಕ್ಷಿಯಾಗಿ ಐಪಿಎಲ್​ ಫೈನಲ್​ನಲ್ಲಿ ಶುಭಮನ್​ ಗಿಲ್​ ಔಟ್ ಆಗಿದ್ದನ್ನು ಪರಿಗಣಿಸಬಹುದು.

ಅತಿ ಹೆಚ್ಚು ವೇಗದಲ್ಲಿ ಸ್ಟಂಪ್​ ಮಾಡಿದ ದಾಖಲೆ ಮತ್ತು ವಿಕೆಟ್​ಗಳನ್ನು ಉರುಳಿಸಿದ ರೆಕಾರ್ಡ್​ ಸಹ ಧೋನಿ ಹೆಸರಿನಲ್ಲಿದೆ. ವಿದೇಶಿ ಕೀಪರ್​ಗಳಿಗೂ ಧೋನಿ ಒಬ್ಬ ಮಾದರಿ ವಿಕೆಟ್​ ಕೀಪರ್​ ಆಗಿದ್ದಾರೆ. ಭಾರತದ ಮುಂದಿನ ಪೀಳಿಗೆ ಕೀಪರ್​ಗಳಿಗೆ ಧೋನಿ ಸ್ಪೂರ್ತಿಯ ಸೆಲೆ. ಕಳೆದ ಕೆಲ ಆವೃತ್ತಿಯ ಐಪಿಎಲ್​ನಲ್ಲಿ ಧೋನಿ ಪಂದ್ಯದ ನಂತರ ಯುವ ಆಟಗಾರರ ಜೊತೆ ಮಾತನಾಡಿ ಅವರಿಗೆ ಸಲಹೆಗಳನ್ನು ಕೊಡುತ್ತಿರುವುದನ್ನು ಕಾಣಬಹುದು. ಧೋನಿ ಮುಕ್ತವಾಗಿ ಎಲ್ಲರಲ್ಲೂ ಬೆರೆತು ಹೇಳಿಕೊಡುವ ವಿಡಿಯೋಗಳು ಕಾಣಸಿಗುತ್ತವೆ.

ಈ ಬಾರಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ ಫೈನಲ್​ನಲ್ಲಿ ಗುಜರಾತ್​ ಟೈಟಾನ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ಮುಖಾಮುಖಿಯಾಗಿತ್ತು. ಗುಜರಾತ್​ ಟೈಟಾನ್ಸ್​ನಲ್ಲಿ ತಂಡದಲ್ಲಿ ವೃದ್ಧಿಮಾನ್​ ಸಹಾ ಇದ್ದುದ್ದರಿಂದ ಶ್ರೀಕರ್​ ಭರತ್​ಗೆ ಈ ಆವೃತ್ತಿಯಲ್ಲಿ ಅವಕಾಶ ಸಿಕ್ಕಿಲ್ಲ. ಆದರೆ ಫೈನಲ್​ ಪಂದ್ಯದ ನಂತರ ಧೋನಿಯೊಂದಿಗೆ ಸಂಭಾಷಣೆ ಮಾಡಿರುವುದಾಗಿ ಶ್ರೀಕರ್​ ಹೇಳಿದ್ದಾರೆ.

ಶ್ರೀಕರ್​ ಭರತ್​ ಅವರು ಐಸಿಸಿ ನಡೆಸಿದ ಸಂದರ್ಶನವೊಂದರಲ್ಲಿ ಧೋನಿ ಬಗ್ಗೆ ಮಾತನಾಡಿದರು. ನಿಮ್ಮ ಫೇವರೇಟ್​ ಕೀಪರ್​ ಯಾರು ಎಂಬ ಪ್ರಶ್ನೆಗೆ ಅವರು ಎಂ.ಎಸ್.ಧೋನಿ ಎಂದು ಹೇಳಿ ಐಪಿಎಲ್​ನಲ್ಲಿ ಅವರೊಂದಿಗೆ ಸಂಭಾಷಣೆ ಮಾಡಿದ ಕ್ಷಣಗಳ ಬಗ್ಗೆ ತಿಳಿಸಿದರು. ​

“ಇತ್ತೀಚೆಗೆ ಐಪಿಎಲ್ ಸಮಯದಲ್ಲಿ ನಾನು ಧೋನಿ ಅವರೊಂದಿಗೆ ಒಂದು ಮಾತು ಹೇಳಿದ್ದೆ. ಧೋನಿ ಇಂಗ್ಲೆಂಡ್‌ನಲ್ಲಿ ತಮ್ಮ ಕೀಪಿಂಗ್ ಅನುಭವಗಳು ಮತ್ತು ಯಾವುದೇ ವಿಕೆಟ್-ಕೀಪರ್‌ಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಬಗ್ಗೆ ಸಲಹೆ ನೀಡಿದ್ದಾರೆ. ಅದು ತುಂಬಾ ಒಳ್ಳೆಯ ಸಂಭಾಷಣೆ ಮತ್ತು ಅದರಿಂದ ಸಾಕಷ್ಟು ತಿಳಿದುಕೊಂಡಿದ್ದೇನೆ. ಕೀಪಿಂಗ್​ ಬಗ್ಗೆ ನಾವೇನಾದರು ತಿಳಿದುಕೊಳ್ಳಬೇಕು ಎಂದರೆ ಅದಕ್ಕೆ ಧೋನಿ ಅತ್ಯುತ್ತಮ ವ್ಯಕ್ತಿ. ಅವರಿಂದ ಕೀಪಿಂಗ್ ಬಗ್ಗೆ ಬಹಳಷ್ಟು ಕಲಿಯಬಹುದು.

ಕೀಪಿಂಗ್‌ನಲ್ಲಿ ಅವರು ಹೊಂದಿರುವ ಅರಿವು ಅಗಾಧ” ಎಂದರು.

29 ವರ್ಷ ವಯಸ್ಸಿನ ಶ್ರೀಕರ್​ ಭರತ್​ ಭಾರತಕ್ಕಾಗಿ ನಾಲ್ಕು ಟೆಸ್ಟ್‌ಗಳನ್ನು ಆಡಿದ್ದಾರೆ. ಕಾರು ಅಪಘಾತದಿಂದ ಗಾಯಕ್ಕೆ ತುತ್ತಾದ ರಿಷಭ್​ ಪಂತ್​ ಬದಲಿ ಆಟಗಾರರಾಗಿ ಈ ವರ್ಷದ ಆರಂಭದಲ್ಲಿ ನಡೆದ ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡಿದ್ದರು. 4 ಪಂದ್ಯದಲ್ಲಿ 44 ರನ್​ ಅವರ ಅತ್ಯುತ್ತಮ ಸ್ಕೋರ್​ ಆಗಿದೆ. ಇಶಾನ್​ ಕಿಶನ್​ ಅವರನ್ನು ಪರ್ಯಾಯ ಕೀಪರ್​ ಆಗಿ ಕೆ.ಎಲ್. ರಾಹುಲ್​ಗೆ ಗಾಯವಾದ ಕಾರಣ ಆಯ್ಕೆ 15ರ ಬಳಗಕ್ಕೆ ಸೇರಿಸಲಾಗಿದೆ. ಆದರೆ ಆಡುವ 11ರಲ್ಲಿ ಭರತ್​ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
“ನಿಮಗೆ ಕೀಪರ್ ಆಗಲು ಉದ್ದೇಶ ಮತ್ತು ಉತ್ಸಾಹ ಬೇಕು. ಏಕೆಂದರೆ ಕೀಪಿಂಗ್ ಕೃತಜ್ಞತೆಯಿಲ್ಲದ ಕೆಲಸ. ಟೆಸ್ಟ್ ದಿನದಲ್ಲಿ 90 ಓವರ್‌ಗಳ ಪ್ರತಿ ಬಾಲ್​ನ ಮೇಲೂ ನಿಗಾ ಇಟ್ಟಿರಬೇಕು. ಅಲ್ಲದೇ ಪ್ರತಿ ಬಾಲ್​ ಕೂಡಾ ಹೊಸ ಸವಾಲಾಗಿರುತ್ತದೆ. ಅದನ್ನು ಸ್ವೀಕರಿಸಲೇಬೇಕು ಮತ್ತು ತಂಡಕ್ಕೆ ಕೊಡುಗೆ ನೀಡುವಲ್ಲಿ ನಿಜವಾಗಿಯೂ ಉತ್ಸಾಹದಿಂದಿರಬೇಕು” ಎಂದು ತಮ್ಮ ಕೀಪಿಂಗ್​ ಅನುಭವ ಹಂಚಿಕೊಂಡರು.