ಭರವಸೆ ಮೂಡಿಸ್ತಿದೆ ಶ್ರೀಕಾಂತರ ಯಕ್ಷ ಧೀಂಗಿಣ: ಗೆಜ್ಜೆ ಕಟ್ಟಿ, ಹೆಜ್ಜೆ ಹಾಕಿದ ಯುವ ಕಲಾವಿದನ ಕತೆ ಕೇಳಿ.

ಕರಾವಳಿಯ ಗಂಡುಕಲೆಯಾದ ಯಕ್ಷಗಾನವು ಇತರ ಎಲ್ಲಾ ಕಲೆಗಳಿಗಿಂತ ಭಿನ್ನವಾಗಿದ್ದು ತನ್ನದೇ ಆದ ವೈಶಿಷ್ಟ್ಯತೆಯಿಂದ ಎಲ್ಲರ ಮನದಲ್ಲಿ ಹಾಸು ಹೊಕ್ಕಾಗಿದೆ. ಎಲೆಮರೆಕಾಯಿಯಂತಿರುವ ಅನೇಕ ಪ್ರತಿಭೆಗಳು ಯಕ್ಷಗಾನದ ಮೂಲಕವೇ ವೇದಿಕೆಗೆ ಅಡಿ ಇಡುತ್ತಿವೆ. ಇಂತದ್ದೇ ನಮ್ಮ ದೇಶಿ ಸೊಗಡಿನ ಅಪ್ಪಟ ಕಲಾ ಪ್ರತಿಭೆ  ಶ್ರೀಕಾಂತ್ ಪೆಲತ್ತೂರು.

ಬಾಲ್ಯದಲ್ಲಿಯೇ ಯಕ್ಷಗಾನದ ವೇಷಭೂಷಣ, ಗೆಜ್ಜೆ, ಹೆಜ್ಜೆಗೆ ಸೋತು ಅದನ್ನು ಹಿಂಬಾಲಿಸಿ ಯಕ್ಷಗಾನದ ಕಲೆಯ ಗೀಳಿಗೆ ತೆರೆದು ಕೊಂಡವರು ಶ್ರೀಕಾಂತ್. ಯಕ್ಷಗಾನ ರಂಗದಲ್ಲಿ ಹತ್ತುವರ್ಷಗಳ ಸುಧೀರ್ಘ ಪಯಾಣ ಇವರದ್ದು.

ರವೀಂದ್ರನಾಯಕ್ ಮತ್ತು ರಂಜಿತಾ ನಾಯಕ್ ದಂಪತಿಯ ಪುತ್ರನಾಗಿ ಕಾರ್ಕಳ ತಾಲ್ಲೂಕಿನ ಕಣಂಜಾರು ಗ್ರಾಮದ ಪೆಲತ್ತೂರಿನಲ್ಲಿ ಹುಟ್ಟಿದ ಇವರಿಗೆ, ಬಾಲ್ಯದಲ್ಲಿಯೇ ಯಕ್ಷಗಾನವೆಂದರೆ ಅದೇನೋ ವಿಶೇಷ ಸೆಳೆತ.  ಇವರ  ತಂದೆ ಕಲಾವಿದರಾಗಿದ್ದುದರಿಂದ ಇವರ ಆಸಕ್ತಿ ಇನ್ನೂ ಇಮ್ಮಡಿಗೊಂಡಿತು.

ಮನೆಯೇ ಮೊದಲ ಯಕ್ಷಶಾಲೆ:

ಮನೆಯೆ ಮೊದಲ ಪಾಠಶಾಲೆ ಎಂಬಂತೆ ತಂದೆಯಿದಲೇ ಮೊದಲ ಯಕ್ಷ ಹೆಜ್ಜೆಗಳನ್ನು ಕಲಿತರು. ನಂತರ ಕಲಾವಿದರಾದ ಮಂಜುನಾಥ್ ಕುಲಾಲ್ ಐರೋಡಿ, ಮಂಕಿ ಈಶ್ವರನಾಯ್ಕ್, ಇವರಿಂದ ರಂಗದ ನಡೆಗಳನ್ನು ಕಲಿತರು.

ಪ್ರಾಥಮಿಕ ಶಿಕ್ಷಣವನ್ನು ಮಡಿಬೆಟ್ಟುನಲ್ಲಿ ಪ್ರೌಢ ಮತ್ತು ಪದವಿ ಪೂರ್ವವನ್ನು ಹಿರಿಯಡ್ಕ ಕಾಲೇಜಿನಲ್ಲಿ ಪಡೆದರು. ನಂತರ ಪದವಿ ಶಿಕ್ಷಣಕ್ಕಾಗಿ ಆಳ್ವಾಸ್ ಕಾಲೇಜಿಗೆ ಸೇರಿದರು. ಸಾಂಸ್ಕೃತಿಕ ದತ್ತುಸ್ವೀಕಾರದ ಅಡಿಯಲ್ಲಿ ಮೂರು ವರ್ಷದ ಉಚಿತ ಶಿಕ್ಷಣ ಮತ್ತು ಧೀಂಕಿಟ ಯಕ್ಷಗಾನ ಕೇಂದ್ರದಿಂದಾಗಿ ಯಕ್ಷಗಾನವನ್ನು ಇನ್ನೂ ಆಳವಾಗಿ ಕಲಿಯಲು ಇವರಿಗೆ ಸಾಧ್ಯವಾಯಿತು. ಹಾಗೂ ಇವರಲ್ಲಿದ್ದ ಪ್ರತಿಭೆ ಮುನ್ನಲೆಗೆ ಬರತೊಡಗಿತು. ಪ್ರಸ್ತುತ ಆಳ್ವಾಸ್ ಧೀಂಕಿಟ ಯಕ್ಷಗಾನ ಹಾಗೂ ಡಿಪ್ಲೋಮದ ಮುಖ್ಯನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ

ಹಿರಿಯಡ್ಕ ವೀರ ಭದ್ರಸ್ವಾಮಿ ಕ್ಷೇತ್ರದಲ್ಲಿ ಮೊದಲಭಾರಿಗೆ ಗೆಜ್ಜೆಕಟ್ಟಿ ಹೆಜ್ಜೆಇಟ್ಟವರು ಮತ್ತೆಂದಿಗೂ ಹಿಂತಿರುಗಿ ನೋಡಲಿಲ್ಲ. ನಂತರ ಪಂಚಬೆಟ್ಟು ಸಂಘ, ಎಣ್ಣೆ ಹೊಳೆ ಸಂಘ ವಿಧ್ಯಾಧರ ರಾವ್ ಜಲವಳ್ಳಿ ಇವರ ನೂತನ ಮೇಳ ಜಲವಳ್ಳಿ ಮೇಳ, ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ಇವರ ಹಟ್ಟಿಯಂಗಡಿ ಮೇಳದಲ್ಲಿ ಇನ್ನೂ ಹಲವಾರು ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ ಶ್ರೀಂಕಾತ್. ಅತಿಥಿಕಲಾವಿದರಾಗಿಯೂ ಪ್ರದರ್ಶನ ನೀಡಿದ್ದಾರೆ.

“ನನ್ನನ್ನು ಯಕ್ಷಗಾನದಲ್ಲೂ ಶಿಕ್ಷಣದ ವಿಷಯದಲ್ಲೂ ಪ್ರೋತ್ಸಾಹಿಸಿದವರು ಪ್ರತಿಷ್ಟಿತ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಧ್ಯಕ್ಷರಾಗಿರುವ ಡಾ. ಮೋಹನ್ ಆಳ್ವ. ಇಂದು ಅವರಿಂದ  ನಾನಿಷ್ಟು ಬೆಳವಣಿಗೆ ಕಾಣುವ  ಹಾಗಾಯಿತು” ಎಂದು ಸಂಸ್ಥೆಯ ಬಗೆಗಿನ ಅಪಾರವಾದ ಅಭಿಮಾನವನ್ನು ತೋರ್ಪಡಿಸುತ್ತಾರೆ. ಶ್ರೀಕಾಂತ್.

ಅಲ್ಲದೇ  ಒಬ್ಬ ಯಕ್ಷಗಾನ ಕಲಾವಿದನಾಗಲು ಸುರೇಶ್ ಕಾಮತ್, ರಘುನಾಥ್ ನಾಯಕ್, ಹರೀಶ್ ಸುವರ್ಣ, ಶಂಕರ್ ನಾಯಕ್ ಎಳ್ಳಾರೆ ಇವರೆಲ್ಲರ  ಬೆಂಬಲ ಮತ್ತು ಸಹಕಾರದಿಂದ ಸಾಧ್ಯವಾಗಿದೆ ಎನ್ನುವುದನ್ನು ಇವರು ನೆನೆಯುತ್ತಾರೆ.

ಬದುಕು ಕೊಟ್ಟಿತು, ಬೆನ್ನು ತಟ್ಟಿತು:
ಕೇವಲ ಯಕ್ಷಗಾನ ವೇಷಧಾರಿ ಮಾತ್ರವಾಗಿರದೇ “ಸಾಹಸ ಸಿಂಹ” ಎಂಬ ಇವರ ರಚನೆಯ ಯಕ್ಷಗಾನ ಪ್ರಸಂಗ ಹಿರಿಯಡಕ ಮೇಳವರಿಂದ ಹಾಗೂ “ಮಾತೃಮಾಣಿಕ್ಯ” ಎಂಬ ಇನ್ನೊಂದು ಪ್ರಸಂಗವನ್ನು ಅಮೃತೇಶ್ವರಿ ಮೇಳ ಕೋಟದಿಂದ ಪ್ರದರ್ಶಿಸಲ್ಪಟ್ಟಿತು ಹಾಗೂ ಈ ಪ್ರಸಂಗ ಇವರಿಗೆ ಅತ್ಯಂತ ಹೆಸರು ತಂದು ಕೊಟ್ಟಿರುವುದು ನಿಜ.

ಇಲ್ಲಿಯವರೆಗೆ ಸುಮಾರು ೫೦೦ಕ್ಕಿಂತಲೂ ಅಧಿಕ ಪ್ರದರ್ಶನವನ್ನು ನೀಡಿರುವ ಇವರಿಗೆ ಕಲಾಶ್ರೀ ಕಲಾಭಿಮಾನಿ ಬಳಗ, ಗುಡ್ಡೆಯಂಗಡಿ ಯಕ್ಷ ವೈಭವ ಗೆಳೆಯರ ಬಳಗ, ನರಸಿಂಗೆ ಅಮೃತೇಶ್ವರೀ ಮೇಳ ಕೋಟ ಇನ್ನೂ ಅನೇಕ ಕಡೆಗಳಲ್ಲಿ ಸನ್ಮಾನಗಳು ಸಂದಿವೆ.

“ನನ್ನ ಹತ್ತುವರ್ಷದ ಯಕ್ಷಗಾನದ ಸುದೀರ್ಘ ಪಯಣದಲ್ಲಿ ಅನೇಕ ವೇಷಗಳಮೂಲಕ ಜನರನ್ನು ರಂಜಿಸಿದ್ದೇನೆ. ಯಕ್ಷಗಾನ ಕಲೆಯ ಬಗ್ಗೆ ಅಭಿಮಾನವಿದೆ. ಯಕ್ಷಗಾನ, ನಮ್ಮ ಮಾತು ಧೈರ್‍ಯವನ್ನು ಇಮ್ಮಡಿಗೊಳಿಸುತ್ತದೆ. ತಂದೆ ತಾಯಿ, ಗುರುಹಿರಿಯರ ಆರ್ಶಿವಾದ ಮತ್ತು ಮೋಹನ ಆಳ್ವರ ಸಹಾಯ ನನ್ನೆಲ್ಲ ಸಾಧನೆಯ ಹಿಂದಿದೆ”ಎಂದು ಆತ್ಮವಿಶ್ವಾಸದಿಂದ ಮಾತನಾಡುವ  ಇವರಿಗೆ  ಯಕ್ಷಲೋಕದಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎನ್ನುವುದು ನಮ್ಮ ಹಾರೈಕೆ.

-ಶ್ರೀರಕ್ಷಾ ರಾವ್ ಪುನರೂರು –ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿ ಆಳ್ವಾಸ್ ಕಾಲೇಜು ಮೂಡಬಿದ್ರಿ