ಶ್ರೀ ಪುತ್ತಿಗೆ ವೈದಿಕ ಲೌಕಿಕ ವಿದ್ಯಾಪೀಠದ ವಸತಿ ಶಾಲೆಗೆ ಭೂಮಿಪೂಜೆ

ಉಡುಪಿ: ಪಾಡಿಗಾರು ಪುತ್ತಿಗೆ ಶಾಖಾ ಮಠದಲ್ಲಿ 2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಶ್ರೀ ಪುತ್ತಿಗೆ ವೈದಿಕ ಲೌಕಿಕ ವಿದ್ಯಾಪೀಠದ ವಸತಿ ಶಾಲೆಗೆ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಅನಂತರ ಮಾತನಾಡಿದ ಸ್ವಾಮೀಜಿ, ಪ್ರಸ್ತುತ ವೈದಿಕ ವಿದ್ಯೆ ಅವನತಿಯ ಕಡೆಗೆ ಸಾಗುತ್ತಿದ್ದು, ಅದನ್ನು ರಕ್ಷಣೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಳೆದ ಐದು ವರ್ಷಗಳಿಂದ ಪಾಡಿಗಾರಿನಲ್ಲಿ ವೈದಿಕ ವಿದ್ಯಾಪೀಠವನ್ನು ನಡೆಸುತ್ತಿದ್ದು, ಇದಕ್ಕೆ
ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿದ್ಯಾಪೀಠ ಸಂಪೂರ್ಣ ಅಭಿವೃದ್ಧಿ ಮಾಡುವ ಸಲುವಾಗಿ ವಿಸ್ತರಣೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ವಿದ್ಯಾಮಂದಿರದಲ್ಲಿ ವಿದ್ಯಾರ್ಥಿಗಳಿಗೆ ಆಂಗ್ಲ ಶಿಕ್ಷಣದ ಜತೆಗೆ ಅರ್ಷವಿದ್ಯೆಯನ್ನೂ ಕಲಿಸಿ ಕೊಡಲಾಗುತ್ತಿದ್ದು, ಹತ್ತನೇ ತರಗತಿಯ ನಂತರ ವಿದ್ಯಾರ್ಥಿಗಳು ಲೌಕಿಕ ಅಥವಾ ವೈದಿಕ ವಿದ್ಯೆಯಲ್ಲಿ ಪೂರ್ಣವಾಗಿ ಮುಂದುವರಿಯಲು ಅವಕಾಶವಿದೆ. ಆರು ವರ್ಷಗಳ ಪರ್ಯಂತ‌ ಎರಡು ವಿದ್ಯೆಗಳ ಮೂಲಭೂತ ಅಂಶಗಳೊಂದಿಗೆ ಉತ್ತಮ ಸಂಸ್ಕಾರವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು. ಎಂಜಿನಿಯರ್‌ ನಾಗರಾಜ ಐತಾಳ್‌, ಗುತ್ತಿಗೆದಾರ ಸಂತೋಷ್‌ ಶೆಟ್ಟಿ ಉಪಸ್ಥಿತರಿದ್ದರು.