ಕುಂದಾಪುರ: ನನ್ನ ಕ್ರಿಕೆಟ್ ಜೀವನ ಮತ್ತೆ ಹಿಂದಿರುಗುತ್ತಿದ್ದು, ಬಿಬಿಸಿಐಗೆ ಧನ್ಯವಾದ ಹೇಳುತ್ತಿದ್ದೇನೆ. ಹಿಂದೆ ನನ್ನ ವಿರುದ್ದವಾಗಿ ಮಾತುಗಳು ಬಂದಾಗ ಬಿಸಿಸಿಐ ನನ್ನ ಪರ ನಿಲ್ಲಲಿಲ್ಲ. ಹೀಗಾಗಿ ನಾನು ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. ಕಳೆದ ಆರು ವರ್ಷಗಳಿಂದ ದೇವರು ನನ್ನ ಪರವಾಗಿ ಇರಲಿಲ್ಲ. ಆದರೆ ಇದೀಗ ನನಗೆ ಮತ್ತೆ ಕ್ರಿಕೆಟ್ ಆಡಲು ಅವಕಾಶ ದೊರೆತಿದೆ. ದೇವರ ಕೃಪೆ ನನ್ನ ಮೇಲಿದೆ ಎಂದು ಕ್ರಿಕೆಟಿಗ ಶ್ರೀಶಾಂತ್ ಹೇಳಿದರು.
ಅವರು ಶುಕ್ರವಾರ ಸಂಜೆ ಬೈಂದೂರಿನ ರುಪೀ ಮಾಲ್ ಉದ್ಘಾಟನೆಗೆ ಬಂದ ವೇಳೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.
ಕಳೆದ ಆರು ವರ್ಷಗಳಿಂದ ನನಗೆ ಕ್ರಿಕೆಟ್ ಆಡಲು ಅವಕಾಶ ಸಿಕ್ಕಿರಲಿಲ್ಲ. ಆ ಸಂದರ್ಭದಲ್ಲಿ ಆದ ನೋವು ನನಗೆ ಮಾತ್ರ ಗೊತ್ತು. ದೇವರ ಕೃಪೆ ನನ್ನ ಮೇಲಿದೆ. ಇದೀಗ ಮತ್ತೆ ನನಗೆ ಕ್ರಿಕೆಟ್ ಆಡಲು ಅವಕಾಶ ಸಿಕ್ಕಿದೆ. ಸೆಪ್ಟೆಂಬರ್ ೨೦೨೦ರಲ್ಲಿ ನಡೆಯುವ ಕೇರಳ ರಣಜಿ ಪಂದ್ಯದಲ್ಲಿ ಆಡುತ್ತಿದ್ದು, ಅದಕ್ಕೂ ಮೊದಲೇ ಏಪ್ರಿಲ್‌ನಲ್ಲಿ ನಡೆಯುವ ಇನ್ನೊಂದು ಲೀಗ್‌ನಲ್ಲೂ ಆಡಲಿದ್ದೇನೆ. ಇಷ್ಟು ದಿನ ದಿನಕ್ಕೆ ಎಂಟು ಗಂಟೆ ಮಲಗುತ್ತಿದೆ. ಆದರೆ ಇನ್ನುಮುಂದೆ ಆರು ಗಂಟೆ ಮಲಗಿ ಉಳಿದ ಎರಡು ಗಂಟೆ ಕ್ರಿಕೆಟ್ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದ್ದೇನೆ.
ಕ್ರಿಕೆಟ್‌ನಿಂದ ಅವಕಾಶ ತಪ್ಪಿ ಹೋದಾಗ ಸಮಯ ಹಾಳು ಮಾಡದೆ ನಾನು ರಾಜಕೀಯ, ಸಿನೆಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡೆ. ಈ ಎರಡೂ ಕ್ಷೇತ್ರವೂ ನನಗೆ ಖುಷಿ ಕೊಟ್ಟಿದೆ. ಭಾರತೀಯ ಜನತಾ ಪಾರ್ಟಿ ದೇಶದ ಅತೀ ದೊಡ್ಡ ಪಕ್ಷವಾಗಿ ಗುರುತಿಸಿಕೊಳ್ಳುತ್ತಿದೆ. ರಾಜಕೀಯ ಕ್ಷೇತ್ರ ನನ್ನ ಆಸಕ್ತಿಯ ಕ್ಷೇತ್ರವಲ್ಲ. ನನ್ನ ತಂದೆ ಬಿಜೆಪಿಯ ಸದಸ್ಯರಾಗಿದ್ದರಿಂದ ನಾನು ಸಕ್ರಿಯ ರಾಜಕಾರಣಕ್ಕೆ ಧುಮುಕಿದೆ.
ಸಮಾಜಸೇವೆ, ದೇಶಸೇವೆ ಮಾಡುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ. ಹೇಗೆ ನಾನು ದೇಶಕ್ಕೋಸ್ಕರ ಕ್ರಿಕೆಟ್ ಆಡುತ್ತೇನೊ ಹಾಗೆಯೇ ರಾಜಕೀಯ ಕ್ಷೇತ್ರದಲ್ಲಿ ದೇಶಸೇವೆ, ಸಮಾಜಸೇವೆ ಮಾಡಲು ನಾನು ಇಷ್ಟಪಡುತ್ತೇನೆ. ಕೆಲವರಿಗೆ ರಾಜಕೀಯ ಕೆಟ್ಟದ್ದು ಎಂಬ ಭಾವನೆ ಇದೆ. ರಾಜಕೀಯದಲ್ಲೂ ಒಳ್ಳೆಯ ಕೆಲಸ ಮಾಡಬಹುದು. ಯುವಕರು ರಾಜಕೀಯಕ್ಕೆ ಬಂದು ದೇಶಸೇವೆ ಮಾಡಬೇಕು ಎಂದು ಶ್ರೀಶಾಂತ್ ಹೇಳಿದರು.
ಕೋಮಲ್ ಅಣ್ಣನಿಗೆ ಸ್ಪೆಶಲಿ ಥ್ಯಾಂಕ್ಸ್!:
ಓರ್ವ ಚಿತ್ರನಟನಾಗಿ ಕನ್ನಡಿಗರು ನನ್ನನ್ನು ಸ್ವೀಕರಿಸಿದ್ದಕ್ಕೆ ನಾನು ತುಂಬಾ ಅಭಾರಿಯಾಗಿದ್ದೇನೆ. ಕೆಂಪೆಗೌಡ-೨ ಸಿನೆಮಾ ದರ್ಶನ್ ನಟನೆಯ ಕುರುಕ್ಷೇತ್ರದ ಜೊತೆಗೆ ಬಿಡುಗಡೆಗೊಂಡಿದೆ. ಆದರೂ ಕೆಂಪೆಗೌಡ-೨ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಹುಮುಖ್ಯವಾಗಿ ಕೋಮಲ್ ಅಣ್ಣನಿಗೆ ನಾನು ಧನ್ಯವಾದ ಹೇಳುತ್ತಿದ್ದೇನೆ. ನನ್ನ ಮುಂದಿನ ಸಿನೆಮಾ ಧೂಮ್ ಎಗೈನ್ ಬರುವ ದಿನಗಳಲ್ಲಿ ತೆರೆ ಕಾಣಲಿದೆ. ಇದರ ಚಿತ್ರೀಕರಣ ಬೆಂಗಳೂರು ಹಾಗೂ ಬಲ್ಗೇರಿಯಾದಲ್ಲಿ ನಡೆಯುತ್ತಿದೆ.
ಧೂಮ್ ಎಗೈನ್ ನನ್ನ ಸಿನೆಮಾ ಜೀವನದಲ್ಲಿ ಮೊದಲ ಥ್ರಿಲ್ಲರ್ ಮೂವಿ. ಈ ಚಿತ್ರದಲ್ಲಿ ನಾನು ಎಸಿಪಿಯಾಗಿ ಅಭಿನಯಿಸುತ್ತಿದ್ದೇನೆ. ಕೆಂಪೇಗೌಡ-೨ ಅಲ್ಲಿ ಖಳನಾಯಕನ ಪಾತ್ರ ಮಾಡಿದ್ದರಿಂದ ನನಗೆ ಡ್ಯಾನ್ಸ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಧೂಮ್ ಎಗೈನ್‌ನಲ್ಲಿ ಡ್ಯಾನ್ಸ್ ಅವಕಾಶ ಸಿಕ್ಕಿದೆ ಎಂದರು.
ಬೆಂಗಳೂರು ನನ್ನ ಮೊದಲ ಮನೆ:
ಮಲೆಯಾಳಿ ಜನರು ನನ್ನನ್ನು ಮಲೆಯಾಳಿ ಹುಡುಗ ಆಗಿ ನೋಡೋದಕ್ಕಿಂತ ಹೆಚ್ಚು ಕನ್ನಡದ ಹುಡುಗನಾಗಿ ನೋಡುತ್ತಾರೆ. ಬೆಂಗಳೂರು ನನ್ನ ಎರಡನೇ ಮನೆಯಲ್ಲ. ಬೆಂಗಳೂರು ನನ್ನ ಮೊದಲನೆ ಮನೆ. ಶೈಕ್ಷಣಿಕ ಜೀವನವನ್ನು ಬೆಂಗಳೂರಿನಲ್ಲಿ ಕಳೆದಿದ್ದೇನೆ. ಹೀಗಾಗಿ ಕನ್ನಡ ಮಾತನಾಡಲು ಕಲಿತೆ. ಕನ್ನಡಿಗರ ಪ್ರೀತಿ ನನ್ನ ಮೇಲಿದೆ. ಎಲ್ಲರೂ ನನ್ನನ್ನು ಕನ್ನಡದ ಮಗನಾಗಿ ನೋಡುತ್ತಾರೆ. ಕರ್ನಾಟಕದಲ್ಲಿದ್ದು ಕನ್ನಡ ಮಾತನಾಡಿ ಎಂದು ನಾನು ಆಗಾಗೇ ನನ್ನ ಸ್ನೇಹಿತರಿಗೆ ಹೇಳುತ್ತಲೇ ಇರುತ್ತೇನೆ ಎಂದರು.
ರಾಜ್ಯಕ್ಕಾಗಿ ಕಪ್ ಗೆಲ್ಲುತ್ತೇನೆ:
ಓರ್ವ ಮಲೆಯಾಳಿಯವನಾಗಿ ನನ್ನ ರಾಜ್ಯಕ್ಕೆ ನಾನು ಒಂದು ಕಪ್ ಅನ್ನಾದರೂ ಜಯಿಸಿ ಕೊಡಲೇಬೇಕು. ದೇಶಕ್ಕಾಗಿ ಆಡಿ ವರ್ಲ್ಡ್ ಕಪ್ ಅನ್ನು ಜಯಿಸಿದ್ದೇನೆ. ನಾನು ರಾಜ್ಯದ ಪರ ಆಡಿ ಪ್ರಶಸ್ತಿ ಗೆದ್ದುಕೊಡಬೇಕು. ಇದು ನನ್ನ ಮುಂದಿನ ಗುರಿ. ಈ ಗುರಿ ಸಾಕಾರಗೊಂಡರೆ ಇದು ನನ್ನ ಜೀವನದೂದ್ದಕ್ಕೂ ನೆನಪಲ್ಲಿರುವ ಜಯ ಎಂದರು.
ಮೂಕಾಂಬಿಕೆ ತಾಯಿ ಆಶೀರ್ವಾದ:
ಈ ಮೊದಲು ನಾನು ಈ ಭಾಗಕ್ಕೆ ಬಂದಿರಲಿಲ್ಲ. ಬೈಂದೂರು ನನಗೆ ತುಂಬಾ ಅಪರಿಚಿತ. ಆದರೆ ರುಪೀ ಮಾಲ್‌ನ ಮಾಲೀಕರು ಕಳೆದ ಇಪ್ಪತ್ತು ವರ್ಷಗಳಿಂದಲೂ ವೈಯಕ್ತಿಕವಾಗಿ ಪರಿಚಯ. ಈ ಸುಂದರ ಗಳಿಗೆಯಲ್ಲಿ ಇಲ್ಲಿನ ಜನರ ಜೊತೆ ಬೆರೆತದ್ದು ತುಂಬಾ ಸಂತಸ ತಂದಿದೆ. ಬೈಂದೂರಿನ ಸಣ್ಣ ಪಟ್ಟಣ ದೊಡ್ಡ ನಗರವಾಗಿ ಬೆಳೆಯುತ್ತಿದೆ. ಮೂಕಾಂಬಿಕೆ ತಾಯಿಯ ಆಶೀರ್ವಾದ ಇಲ್ಲಿನ ಜನರ ಮೇಲಿದೆ. ಇನ್ನು ಸ್ವಲ್ಪ ಸಮಯದಲ್ಲೇ ಬೈಂದೂರು ಇನ್ನಷ್ಟು ಅಭಿವೃದ್ದಿಗೊಳ್ಳುತ್ತದೆ ಎಂದರು.