ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮದಲ್ಲಿ ಉಡುಪಿಯ ಕುಮಾರಿ ಶ್ರದ್ಧಾ ಕೆ. ಭಟ್ ಇವರು ನೃತ್ಯ ಪ್ರದರ್ಶನ ನೀಡಿದರು .
ಸಾಂಪ್ರದಾಯಿಕ ಪುಷ್ಪಅಂಜಲಿ ನೃತ್ಯದೊಂದಿಗೆ ಹೆಜ್ಜೆ ಹಾಕಿದ ಶ್ರದ್ಧಾ ಅವರು ತಿಲ್ಲಾನದೊಂದಿಗೆ ಕೊನೆಗೊಳಿಸಿದರು. ನಡುವೆ ಪ್ರದರ್ಶಿಸಿದ “ಆಡಿಸಿದಳೇ ಯಶೋಧ -ಜಗದೋದ್ಧಾರನ ” ಮತ್ತು “ದುರ್ಗೆ ” ನೃತ್ಯವು ಪ್ರೇಕ್ಷಕರನ್ನು ಕಣ್ಮನಗೊಳಿಸಿತ್ತು.
ಕೀಳಂಜೆ ಶ್ರೀ ಕೃಷ್ಣರಾಜ ಭಟ್ ಮತ್ತು ಶ್ರೀಮತಿ ವಸುಧಾ ಭಟ್ ದಂಪತಿಯ ಸುಪುತ್ರಿಯಾದ ಕುಮಾರಿ ಶ್ರದ್ಧಾ ಕೆ. ಭಟ್ ಇವರು ಪ್ರಸ್ತುತ ಉಡುಪಿಯ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ತೃತೀಯ ಬಿಸಿಎಯನ್ನು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಉಡುಪಿಯ ರಾಧಾಕೃಷ್ಣ ನೃತ್ಯನಿಕೇತನದ ಗುರುಗಳಾದ ನೃತ್ಯ ವಿದುಷಿ ಶ್ರೀಮತಿ ವೀಣಾ ಸಾಮಗ ಅವರ ಬಳಿ ನೃತ್ಯಭ್ಯಾಸ ಮಾಡುತ್ತಿದ್ದು, ಭರತನಾಟ್ಯ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಚಿಕ್ಕಂದಿನಿಂದಲೂ ನೃತ್ಯದ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ ಇವರು 500ಕ್ಕೂ ಹೆಚ್ಚು ನೃತ್ಯ ಪ್ರದರ್ಶನವನ್ನು ನೀಡಿರುತ್ತಾರೆ. ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದಲ್ಲಿಯೂ ಹಲವು ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ, ವಿಜೇತರಾಗಿದ್ದ ಇವರು ಶ್ರೀಮತಿ ಉಷಾ ಹೆಬ್ಬಾರ್ ಅವರಲ್ಲಿ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದು ಶಾಸ್ತ್ರೀಯ ಸಂಗೀತ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.ಇವರು ಸೆಮಿ ಕ್ಲಾಸಿಕಲ್ ನೃತ್ಯಕ್ಕೆ ಅನೇಕ ನಿರ್ದೇಶನವನ್ನು ನೀಡಿರುವುದಲ್ಲದೆ, ನಾಟಕಗಳಲ್ಲಿಯೂ ಅಭಿರುಚಿಯನ್ನು ಹೊಂದಿರುತ್ತಾರೆ.