ಕಾರ್ಕಳ: ಕಾಂಗ್ರೆಸ್ ಪಕ್ಷದ ನಾಯಕರ ಹಿಂದೂ ವಿರೋಧಿ ಮಾನಸಿಕತೆಗೆ ಇನ್ನೊಂದು ಪುರಾವೆ ನಿನ್ನೆ ಸಿಕ್ಕಿದೆ. ಕಾಂಗ್ರೆಸ್ ಪಕ್ಷದ ನಾಯಕರಾದ ದಿನೇಶ್ ಗುಂಡೂರಾವ್ ಅವರು ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದರೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಹೇಳಿ ಕಾಂಗ್ರೆಸ್ ಹಿಂದೂ ದ್ವೇಷದ ಬೆಂಕಿಗೆ ತುಪ್ಪ ಹಾಕಿದ್ದಾರೆ.
ಸೋಲಿನ ಭೀತಿಯಲ್ಲಿ ಇರುವ ಕಾಂಗ್ರೆಸ್ ನಾಯಕರು ಇಂತಹ ಕೀಳು ಅಭಿರುಚಿಯ ಮಾತುಗಳನ್ನು ಆಡುತ್ತಿರುವುದನ್ನು ಕರ್ನಾಟಕದ ಪ್ರಜ್ಞಾವಂತ ಮತದಾರರು ತುಂಬಾ ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಭಾರತದ ಸಂತ ಪರಂಪರೆಯ ಒಂದು ಪ್ರಮುಖ ಕೊಂಡಿ. ಘೋರಖನಾಥ್ ದೇವಸ್ಥಾನದ ಅರ್ಚಕರಾಗಿರುವ ಅವರು ಅತೀ ಸಣ್ಣ ಪ್ರಾಯದಲ್ಲಿ ನಾಲ್ಕು ಬಾರಿ ಸಂಸದರಾಗಿ, ಮುಂದೆ ಎರಡು ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿ ಮಾಡಿರುವ ಕೆಲಸಗಳು ಅತ್ಯಂತ ಅದ್ಭುತವಾಗಿವೆ. ನಾಥ ಪರಂಪರೆಯ ಪ್ರುಮುಖ ಸಂತರಾಗಿ ಅವರಿಗೆ ದೇಶದಲ್ಲಿ ಭಾರೀ ಕೀರ್ತಿ ಇದೆ. ಅವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರು ಇಡೀ ಭಾರತದ ಸಂತ ಪರಂಪರೆಗೆ ಅಪಮಾನ ಮಾಡಿದ್ದಾರೆ. ಇಂಥಹ ಹಿಂದೂ ವಿರೋಧಿ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷವು ಹಿಂದೂಗಳ ಆಕ್ರೋಶಕ್ಕೆ ತುತ್ತಾಗಿದೆ.
ಕರ್ನಾಟಕದಲ್ಲಿ ಹಿಂದೆ ಇದ್ದ ಸಿದ್ಧರಾಮಯ್ಯ ಸರಕಾರವು ನಡೆಸಿದ ಹಿಂದೂ ವಿರೋಧಿ ಚಟುವಟಿಕೆ, ಹೇಳಿಕೆಗಳು, ಹಿಂದೂ ದೌರ್ಜನ್ಯಗಳನ್ನು ಕರ್ನಾಟಕದ ಹಿಂದೂಗಳು ಮರೆಯಲು ಸಾಧ್ಯವೇ ಇಲ್ಲ. SDPI ಮತ್ತು PFI ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತರ ಮೇಲೆ ಇದ್ದ ಕೇಸಗಳನ್ನು ವಾಪಸ್ಸು ಪಡೆದದ್ದು ಮಾತ್ರವಲ್ಲ ಅದರ ಪರಿಣಾಮವಾಗಿ ಸರಣಿ ಹಿಂದೂ ಕಾರ್ಯಕರ್ತರ ಹತ್ಯೆಗೆ ಪರೋಕ್ಷವಾಗಿ ಕಾರಣ ಆಗಿದ್ದರು. ಟಿಪ್ಪು ಜಯಂತಿ, ಶಾದಿ ಭಾಗ್ಯ ಮೊದಲಾದ ಅಲ್ಪಸಂಖ್ಯಾತರ ತುಷ್ಟೀಕರಣ ಯೋಜನೆಗಳನ್ನು ರೂಪಿಸಿ ವೋಟ್ ಬ್ಯಾಂಕ್ ರಾಜಕಾರಣ ಮಾಡಿದವರು ಅವರು. ಡಿಕೆ ಶಿವಕುಮಾರ್ ಅವರು ಮುಸಲ್ಮಾನರು ತನ್ನ ಬ್ರದರ್ಸ್ ಎಂದು ಹೇಳಿದ್ದು, ಕುಕ್ಕರ್ ಭಯೋತ್ಪಾದಕನನ್ನು ಅಮಾಯಕ ಎಂದು ಕರೆದದ್ದು ನಮ್ಮ ಕಣ್ಣ ಮುಂದೆ ಇರುವ ಘಟನೆಗಳು. ಇದೀಗ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಭಜರಂಗ ದಳ ಬ್ಯಾನ್ ಮಾಡಲು ಹೊರಟದ್ದು ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧದ ಸಂಕೇತ ಆಗಿದೆ.
ಭಜರಂಗದಳವು ರಾಷ್ಟ್ರ ಭಕ್ತರ ಸಂಘಟನೆ. ಅದರ ಬಗ್ಗೆ ಮಾತಾಡುವ ನೈತಿಕತೆಯು ಕೂಡ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಇದನ್ನು ಕಾರ್ಕಳ ಬಿಜೆಪಿ ಅತ್ಯಂತ ಪ್ರಬಲವಾಗಿ ಟೀಕೆ ಮಾಡುತ್ತದೆ.
ವಿನಾಶ ಕಾಲೇ ವಿಪರೀತ ಬುದ್ಧಿ ಎನ್ನುವುದು ಕಾಂಗ್ರೆಸ್ ನಾಯಕರಿಗೆ ಸರಿಯಾಗಿ ಒಪ್ಪುತ್ತದೆ. ಸಚಿವ ಸುನೀಲ್ ಕುಮಾರ್ ಅವರನ್ನು ನೇರವಾಗಿ ಎದುರಿಸಲು ನೈತಿಕತೆ ಇಲ್ಲದ ಕಾರ್ಕಳದ ಕಾಂಗ್ರೆಸ್ ನಾಯಕರು ಇದೀಗ ಅಪಪ್ರಚಾರದ ಮೂಲಕ ತನ್ನ ಚಾಳಿಯನ್ನು ಮುಂದುವರೆಸಿದ್ದಾರೆ. ಹತಾಶೆಯ ಪ್ರತೀಕವಾಗಿ ಬಿಜೆಪಿ ಕಾರ್ಯಕರ್ತರ ಚಾರಿತ್ರ್ಯ ನಾಶವನ್ನು ಸುಳ್ಳು ಪ್ರಚಾರದ ಮೂಲಕ ಮಾಡಲು ಹೊರಟಿದ್ದಾರೆ.
ನಮ್ಮ ಸಚಿವರಾದ ವಿ ಸುನೀಲ್ ಕುಮಾರ್ ಅವರ ಸ್ವರ್ಣ ಕಾರ್ಕಳದ ಪರಿಕಲ್ಪನೆಗೆ ಅಪಚಾರ ಆಗುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಇದನ್ನೆಲ್ಲ ಕಾರ್ಕಳದ ಪ್ರಜ್ಞಾವಂತ ಮತದಾರರು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಮೇ 10ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸಿಗೆ ಅವರೇ ಬುದ್ಧಿ ಕಲಿಸುತ್ತಾರೆ. ಸುನೀಲ್ ಕುಮಾರ್ ಅವರು ಈ ಬಾರಿ ಗೆಲ್ಲುವುದನ್ನು ತಡೆಯಲು ಯಾವ ಶಕ್ತಿಗೂ ಸಾಧ್ಯವಿಲ್ಲ. ಬಿಜೆಪಿಯ ದೇವ ದುರ್ಲಭ ಕಾರ್ಯಕರ್ತರು ಸದಾ ಅವರ ಬೆನ್ನಿಗೆ ನಿಲ್ಲುತ್ತಾರೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.