ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳಿಂದಲೇ ಪ್ರೇಕ್ಷಕರ ಮನ ಗೆದ್ದಿರುವ ನಟ ಪ್ರಮೋದ್ ಶೆಟ್ಟಿ. ಪಾತ್ರದಿಂದ ಪಾತ್ರಕ್ಕೆ ಮ್ಯಾನರಿಸಂನ ಚೇಂಜ್ ಮಾಡಿಕೊಳ್ಳುವ ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಚಿತ್ರ ‘ಜಲಂಧರ’.ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸಿರುವ ‘ಜಲಂಧರ’ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದೆ.ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಪ್ರಮೋದ್ ಶೆಟ್ಟಿಯವರ ಹುಟ್ಟುಹಬ್ಬಕ್ಕೆ ಈ ಚಿತ್ರದ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ.
ವಿಷ್ಣು ವಿ ಪ್ರಸನ್ನ ಚೊಚ್ಚಲ ನಿರ್ದೇಶನದ ಈ ಚಿತ್ರ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಕಾವೇರಿ ನದಿ ದಡದ ಮಧುವತ್ತಿ ಎಂಬ ಊರಿನಲ್ಲಿ ಈ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಲೋಕೇಶ್ ‘ಜಲಂಧರ’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸ್ಟೆಪ್ ಅಪ್ ಪಿಕ್ಚರ್ಸ್ ಲಾಂಛನದಲ್ಲಿ ಮದನ್ ಎಸ್ ನಿರ್ಮಾಣ ಮಾಡುತ್ತಿದ್ದಾರೆ. ಚಂದ್ರ ಮೋಹನ್, ರಾಮಚಂದ್ರ ಹಾಗೂ ಪದ್ಮನಾಭನ್ ಸಹ ನಿರ್ಮಾಪಕರಾಗಿದ್ದಾರೆ. ಮುತ್ತತ್ತಿ, ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.
ಸ್ಯಾಂಡಲ್ವುಡ್ ಭರವಸೆ ನಟ ಪ್ರಮೋದ್ ಶೆಟ್ಟಿ: ಪಾತ್ರ ಯಾವುದೇ ಆಗಿರಲಿ, ಇವರಿಗೆ ಅದು ಕಠಿಣವಲ್ಲ. ಕೊಟ್ಟ ಅವಕಾಶವನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡು ಸ್ಯಾಂಡಲ್ವುಡ್ನ ಭರವಸೆಯ ಕಲಾವಿದರಾಗಿ ಗುರುತಿಸಿಕೊಂಡವರು ಪ್ರಮೋದ್ ಶೆಟ್ಟಿ. ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ರಿಕ್ಕಿ, ಬೆಲ್ ಬಾಟಂ, ಅವನೇ ಶ್ರೀಮನ್ನಾರಾಯಣ, ತೂತುಮಡಿಕೆ, ಕಾಂತಾರ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ತಮ್ಮ ಅಮೋಘ ಮತ್ತು ಅತ್ಯದ್ಭುತ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.
ಮತ್ತೊಂದೆಡೆ, ‘ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ’ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. ವಡ್ಡಾರಾಧಕ ಹಾಗೂ ಶಬರಿ ಎಂಬ ಎರಡು ಕಿರು ಚಿತ್ರಗಳನ್ನು ನಿರ್ದೇಶಿಸಿದ್ದ ಯುವ ಪ್ರತಿಭೆ ಅನೀಶ್ ಶರ್ಮ ಈ ಚಿತ್ರಕ್ಕೆ ಆಯಕ್ಷನ್ ಕಟ್ ಹೇಳುತ್ತಿದ್ದಾರೆ. ರಾಘು ಶಿವಮೊಗ್ಗ, ಕಿರಣ್ ನಾಯಕ್, ಮಂಜುನಾಥ್ ಹೆಗಡೆ, ಕೆಜಿ ಕೃಷ್ಣಮೂರ್ತಿ, ಚಂದ್ರಕಲಾ ಚಿತ್ರದ ಭಾಗವಾಗಿದ್ದಾರೆ.
ಈಗಾಗಲೇ ಪ್ರಮೋದ್ ಶೆಟ್ಟಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ರಿಷಬ್ ಶೆಟ್ಟಿ ನಿರ್ಮಾಣದ ‘ಲಾಫಿಂಗ್ ಬುದ್ಧ’ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ, ನಿರ್ದೇಶಕ ರಮೇಶ್ ಬೇಗಾರ್ ರಚಿಸಿ, ನಿರ್ದೇಶಿಸಿರುವ ‘ಜಲಪಾತ’ ಚಿತ್ರದಲ್ಲಿ ಪ್ರತಿಭಾವಂತ ನಟ ಒಂದು ಪರಿಪೂರ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರತಂಡ ಹೀಗಿದೆ.. ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅಲ್ಲದೇ ಲೋಕೇಶ್ ಗೌಡ, ರಘು ರಮಣಕೊಪ್ಪ, ಬಾಲ ರಾಜವಾಡಿ, ರಿಶಿಕಾ ರಾಜ್, ಆರೋಹಿತ ಗೌಡ, ನವೀನ್ ಸಾಗರ್, ಪ್ರತಾಪ್ ಮುಂತಾದವರು ಇದ್ದಾರೆ. ಚಿತ್ರಕ್ಕೆ ಸರಿನ್ ರವೀಂದ್ರನ್ ಹಾಗೂ ವಿದ್ಯಾಶಂಕರ್ ಛಾಯಾಗ್ರಹಣ, ಜತಿನ್ ದರ್ಶನ್ ಸಂಗೀತ ನಿರ್ದೇಶನ ಹಾಗೂ ವೆಂಕಿ ಯು.ಡಿ.ವಿ ಸಂಕಲನವಿದೆ. ಸದ್ಯದಲ್ಲೇ ‘ಜಲಂಧರ’ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆಗೊಳಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.