ನೀಟ್ ಪರೀಕ್ಷೆ ಬರೆದವರಿಗೆ ಶಾಕಿಂಗ್ ನ್ಯೂಸ್: ಪರೀಕ್ಷೆಯನ್ನೇ ರದ್ದು ಮಾಡಿದ ಕೇಂದ್ರ ಸರಕಾರ, ಸಿಬಿಐ ತನಿಖೆಗೆ ಮಹತ್ವದ ಆದೇಶ

National Testing Agency 2026ರ NEET UG ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರದ್ದುಗೊಳಿಸಿದೆ. ಇದರೊಂದಿಗೆ ಕೇಂದ್ರ ಸರ್ಕಾರ ಪ್ರಕರಣದ ತನಿಖೆಯನ್ನು CBI- Central Bureau of Investigation ಗೆ ವಹಿಸಿದೆ.

ಭಾರತದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET UG 2026 ಮೇ 3ರಂದು ನಡೆದಿತ್ತು. ಆದರೆ ಪರೀಕ್ಷೆಗೆ ಮುನ್ನವೇ ‘ಗೆಸ್ ಪೇಪರ್’ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆ ಪರೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಎನ್‌ಟಿಎ ತನ್ನ ಅಧಿಕೃತ ಪ್ರಕಟಣೆಯಲ್ಲಿ, “ಮೇ 8, 2026ರಂದು ಪರೀಕ್ಷೆಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಸ್ವತಂತ್ರ ಪರಿಶೀಲನೆ ಮತ್ತು ಅಗತ್ಯ ಕ್ರಮಕ್ಕಾಗಿ ಕೇಂದ್ರ ಸಂಸ್ಥೆಗಳ ಗಮನಕ್ಕೆ ತರಲಾಗಿತ್ತು. ನ್ಯಾಯಯುತ, ಸುರಕ್ಷಿತ ಹಾಗೂ ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಬದ್ಧತೆ” ಎಂದು ತಿಳಿಸಿದೆ.

ಪರೀಕ್ಷೆ ರದ್ದುಗೊಳಿಸಿದ್ದೇಕೆ?

ಕಾನೂನು ಜಾರಿ ಸಂಸ್ಥೆಗಳು ಹಂಚಿಕೊಂಡ ಮಾಹಿತಿಗಳ ಪರಿಶೀಲನೆಯ ಬಳಿಕ ಪರೀಕ್ಷಾ ಪ್ರಕ್ರಿಯೆಯಲ್ಲಿ ರಾಜಿ ಸಂಭವಿಸಿರುವ ಸಾಧ್ಯತೆ ಕಂಡುಬಂದಿದೆ ಎಂದು ಎನ್‌ಟಿಎ ಹೇಳಿದೆ. ಲಭ್ಯವಿರುವ ಪುರಾವೆಗಳನ್ನು ಪರಿಗಣಿಸಿದ ನಂತರ ಪರೀಕ್ಷೆಯನ್ನು ಮುಂದುವರಿಸುವುದು ಸೂಕ್ತವಲ್ಲ ಎಂದು ನಿರ್ಧರಿಸಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.

ಸಿಬಿಐ ತನಿಖೆ

ಪ್ರಕರಣದ ಸಮಗ್ರ ತನಿಖೆಗಾಗಿ ಕೇಂದ್ರ ಸರ್ಕಾರವು ಸಿಬಿಐಗೆ ಆದೇಶಿಸಿದೆ. ಪರೀಕ್ಷೆಗೆ ಮುನ್ನ ‘ಗೆಸ್ ಪೇಪರ್’ ಹೇಗೆ ಸೋರಿಕೆಯಾಯಿತು, ಇದರ ಹಿಂದೆ ಸಂಘಟಿತ ಜಾಲವಿದೆಯೇ ಎಂಬುದನ್ನು ತನಿಖಾ ಸಂಸ್ಥೆ ಪರಿಶೀಲಿಸಲಿದೆ.

ಎನ್‌ಟಿಎ ತನಿಖೆಗೆ ಅಗತ್ಯವಿರುವ ದಾಖಲೆಗಳು, ಡೇಟಾ ಮತ್ತು ಇತರ ಮಾಹಿತಿಗಳನ್ನು ಸಂಪೂರ್ಣವಾಗಿ ಒದಗಿಸುವುದಾಗಿ ತಿಳಿಸಿದೆ.

ಮರು ಪರೀಕ್ಷೆ ಸಾಧ್ಯತೆ

ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ವಿಷಯವಾಗಿರುವುದರಿಂದ, ಕೇಂದ್ರ ಸರ್ಕಾರ ಮರು ಪರೀಕ್ಷೆ ನಡೆಸುವ ಸಾಧ್ಯತೆಯನ್ನೂ ಸೂಚಿಸಿದೆ. ಹೊಸ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.