ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಉಂಟಾಗಿದೆ. ಅಡುಗೆ ಅನಿಲ ಸಿಲಿಂಡರ್ ಗಳ ಬೆಲೆಯಲ್ಲಿ ಮತ್ತೆ ₹25.50 ಹೆಚ್ಚಳವಾಗಿದೆ. ಪರಿಷ್ಕೃತ ದರದಂತೆ ದೆಹಲಿಯಲ್ಲಿ ಒಂದು ಅಡುಗೆ ಅನಿಲ ಸಿಲಿಂಡರ್ ಬೆಲೆ ₹809 ರಿಂದ ₹834.50 ಗೆ ಏರಿಕೆಯಾಗಿದೆ.
ಪ್ರತಿ ತಿಂಗಳ ಮೊದಲ ದಿನ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಗಳ ಬೆಲೆ ಪರಿಷ್ಕರಣೆ ಮಾಡುತ್ತಿದ್ದು, ಅದರಂತೆ ಈ ತಿಂಗಳಲ್ಲಿ ದರ ಹೆಚ್ಚಳ ಮಾಡಿವೆ. ಮೇ 1ರಂದು ಗ್ಯಾಸ್ ಕಂಪನಿಗಳು ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಎಲ್ ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು 10 ರೂಪಾಯಿ ಇಳಿಕೆ ಮಾಡಿದ್ದ ನಂತರ ಏಪ್ರಿಲ್ ನಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಲಾಗಿತ್ತು. ಇದಕ್ಕೂ ಮೊದಲು ಫೆಬ್ರುವರಿ ಮತ್ತು ಮಾರ್ಚ್ ನಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗಿತ್ತು.
ಮಹಾನಗರಗಳಲ್ಲಿ ಎಲ್ ಪಿಜಿ ದರದ ವಿವರ:
ಮುಂಬೈನಲ್ಲಿ 14.2ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ ₹809ರಿಂದ 834.50 ರೂಪಾಯಿಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 14.2ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ ₹ 812ರಿಂದ 836.50 ರೂಪಾಯಿಗೆ ಹೆಚ್ಚಳವಾಗಿದೆ. ಕೋಲ್ಕತಾದಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆ 835.50 ರೂ. ಇದ್ದಿದ್ದು, ಈಗ 861 ರೂಪಾಯಿಗೆ ಏರಿಕೆಯಾಗಿದೆ.