ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಶುಕ್ರವಾರ ಕಾಂಗ್ರೆಸ್ ಪಕ್ಷವನ್ನು ತೊರೆದು ತಮ್ಮ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ಬರೆದ ಐದು ಪುಟಗಳ ಪತ್ರದಲ್ಲಿ ಆಜಾದ್, ಕಾಂಗ್ರೆಸ್ ಪರಿಸ್ಥಿತಿ “ಹಿಂತಿರುಗಲಾಗುವುದಿಲ್ಲ” ಎಂಬ ಹಂತವನ್ನು ತಲುಪಿದೆ ಎಂದು ಹೇಳಿದ್ದಾರೆ.
ಇಡೀ ಸಂಸ್ಥೆಯ ಆಯ್ಕೆ ಪ್ರಕ್ರಿಯೆಯು ಒಂದು ಪ್ರಹಸನ ಮತ್ತು ನೆಪವಾಗಿದೆ. ದೇಶದ ಯಾವುದೇ ಸ್ಥಳದಲ್ಲಿ ಯಾವುದೇ ಸಂಘಟನೆಯ ಮಟ್ಟದಲ್ಲಿ ಚುನಾವಣೆ ನಡೆದಿಲ್ಲ. 24 ಅಕ್ಬರ್ ರಸ್ತೆಯಲ್ಲಿ ಕುಳಿತು ಎಐಸಿಸಿ ನಡೆಸುತ್ತಿರುವ ಕೂಟವು ಸಿದ್ಧಪಡಿಸಿದ ಪಟ್ಟಿಗಳಿಗೆ ಸಹಿ ಹಾಕುವಂತೆ ಎಐಸಿಸಿಯ ಆಯ್ಕೆಯಾದ ನಾಯಕರನ್ನು ಒತ್ತಾಯಿಸಲಾಗಿದೆ. ರಾಹುಲ್ ಗಾಂಧಿಯವರ ರಾಜಕೀಯ ಪ್ರವೇಶದ ನಂತರ, ವಿಶೇಷವಾಗಿ 2013 ರಲ್ಲಿ ಪಕ್ಷದ ಉಪಾಧ್ಯಕ್ಷರಾಗಿ ನೇಮಕಗೊಂಡ ನಂತರ, “ಮೊದಲು ಅಸ್ತಿತ್ವದಲ್ಲಿದ್ದ ಸಂಪೂರ್ಣ ಸಮಾಲೋಚನಾ ಕಾರ್ಯವಿಧಾನವನ್ನು ಅವರು ಕೆಡವಿದರು”. ಎಲ್ಲಾ ಹಿರಿಯ ಮತ್ತು ಅನುಭವಿ ನಾಯಕರನ್ನು ಬದಿಗೆ ಸರಿಸಲಾಗಿದೆ ಮತ್ತು ಅನನುಭವಿ ಹೊಸ ಕೂಟವು ಪಕ್ಷದ ವ್ಯವಹಾರಗಳನ್ನು ನಡೆಸಲು ಪ್ರಾರಂಭಿಸಿತು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸುಧೀರ್ಘ ಪತ್ರದಲ್ಲಿ ಕಾಂಗ್ರೆಸ್ ನ ಅಧಃಪತನಕ್ಕೆ ಕಾರಣವಾಗಿರುವ ಅಂಶಗಳನ್ನು ಉಲ್ಲೇಖಿಸಿರುವ ಆಜಾದ್, ಪಕ್ಷಕ್ಕೆ ತಾನು ನೀಡಿದ ವರ್ಷಗಳ ಸೇವೆಯನ್ನು ವಿವರಿಸಿ “ಅತ್ಯಂತ ವಿಷಾದ ಮತ್ತು ಅತ್ಯಂತ ಭಾರವಾದ ಹೃದಯದಿಂದ ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗಿನ ನನ್ನ ಅರ್ಧ ಶತಮಾನದ ಹಳೆಯ ಒಡನಾಟವನ್ನು ಕಡಿದುಕೊಳ್ಳಲು ನಿರ್ಧರಿಸಿದ್ದೇನೆ” ಎಂದಿದ್ದಾರೆ.