ಉಡುಪಿ: ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಭಾಗಶಃ ಹಾನಿಗೊಳಗಾದ ಮನೆಗಳಿಗೆ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ಒದಗಿಸುವಂತೆ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಸೂಚಿಸಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲೆಯ ಮಳೆ ಹಾನಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ 4 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ನೀಡಿದ ಮಾಹಿತಿಗೆ ಸಂಬಂದಿಸಿದಂತೆ ಮಾತನಾಡಿದ, ಸಂಸದರು ಜಿಲ್ಲೆಯಲ್ಲಿ ಭಾಗಶ: ಹಾನಿಯಾದ ಮನೆಗಳು ಗರಿಷ್ಠ ಸಂಖ್ಯೆಯಲ್ಲಿದ್ದು, ಈ ಮನೆಗಳ ಹಾನಿಯ ಕುರಿತು ಪುನ: ಪರಿಶೀಲಿಸಿ, ಮನೆಯವರ ಅಭಿಪ್ರಾಯ ಪಡೆದು, ಗರಿಷ್ಠ ಮೊತ್ತದ ಪರಿಹಾರ ವಿತರಿಸುವಂತೆ ಎಲ್ಲಾ ತಹಸೀಲ್ದಾರ್‍ಗಳಿಗೆ ಸೂಚಿಸಿದರು.
ಭತ್ತದ ಬೆಳೆ ಹಾನಿಗೆ ಸಂಬಂಧಿಸಿದಂತೆ ಇಂದಿನವರೆಗೆ 708 ಪ್ರಕರಣಗಳಲ್ಲಿ ಒಟ್ಟು 325 ಹೆಕ್ಟೇರ್ ಬೆಳೆ ಹಾನಿಯಾಗಿದೆ, ಅಂದಾಜು 22 ಲಕ್ಷ ನಷ್ಟವಾಗಿದೆ, ತೋಟಗಾರಿಕಾ ಬೆಳೆಯಲ್ಲಿ 11.26 ಎಕ್ರೆಗೆ ಹಾನಿಯಾಗಿದ್ದು, ಅಂದಾಜು 14.64 ಲಕ್ಷ ನಷ್ಟವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸಮುದ್ರ ಕೊರೆತ ತಡೆಯುವ ಕುರಿತಂತೆ ಸೂಕ್ತ ಯೋಜನೆ ರೂಪಿಸಿ ಅಗತ್ಯ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಂಸದರು ಸೂಚಿಸಿದರು.
ಮುಂದಿನ ವರ್ಷಗಳಲ್ಲಿ ನೀರಿನ ಕೊರತೆ ಉಂಟಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ, ಬಜೆ ಡ್ಯಾಮ್‍ನಲ್ಲಿ ತುಂಬಿರುವ ಹೂಳನ್ನು ತೆಗೆಯುವ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದರು ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.