ಮೊಗವೀರ ಸಮುದಾಯ ಬಿಜೆಪಿ ಕೈ ಹಿಡಿದಿದ್ದರಿಂದ ನನಗೆ ಗೆಲುವು ಸಿಕ್ತು:ಕರಂದ್ಲಾಜೆ

ಕುಂದಾಪುರ: ಎಲ್ಲಾ ಒತ್ತಡ, ಆಮಿಷಗಳ ಮಧ್ಯೆ ಲೋಕಸಭೆ ಚುನಾವಣೆಯಲ್ಲಿ ಮೊಗವೀರ ಸಮುದಾಯ ಬಿಜೆಪಿ ಕೈ ಹಿಡಿದಿದ್ದರಿಂದ ನನಗೆ ದೊಡ್ಡಮಟ್ಟದ ಅಂತರದಲ್ಲಿ ಗೆಲುವು ಸಾಧ್ಯವಾಯಿತು. ಮೊಗವೀರ ಸಮುದಾಯ ಭಾರತೀಯ ಜನತಾ ಪಕ್ಷದ ಪರ ನಿಂತಿದೆ. ನಮಗೆ ಬರುವ ಮತಗಳಲ್ಲಿ ಈ ಭಾರಿ ಒಂದು ಹುಲ್ಲುಕಡ್ಡಿಯಷ್ಟು ವ್ಯತ್ಯಾಸವಾಗಿಲ್ಲ. ಜಿ.ಶಂಕರ್ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಜಿ. ಶಂಕರ್ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಕುಂದಾಪುರ ಬಿಜೆಪಿ ಕಚೇರಿಗೆ ಶನಿವಾರ ಮಧ್ಯಾಹ್ನ ಭೇಟಿ ನೀಡಿ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ಕೇಂದ್ರ ಮೀನುಗಾರಿಕಾ ಸಚಿವರ ಮೂಲಕ ಮೀನುಗಾರರ ಬೇಡಿಕೆಗಳನ್ನು ಈಡೇರಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಹೆಜಮಾಡಿ, ಕೋಡಿಕನ್ಯಾನ ಬಂದರು, ಮಲ್ಪೆ ರಸ್ತೆ ವಿಸ್ತರಣೆ ಮುಂತಾದ ಮೀನುಗಾರರ ಬೇಡಿಕೆಗಳಿಗೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಸ್ಪಂದಿಸುತ್ತದೆ. ಮೀನುಗಾರರಿಗೆ ಸರ್ಕಾರದ ಮಟ್ಟದಲ್ಲಿ ಏನೇನು ಆಗಬೇಕು ಅವೆಲ್ಲವನ್ನೂ ತರುವಂತಹ ಕೆಲಸವನ್ನು ಕರಾವಳಿಯ ಮೂವರು ಸಂಸದರು ಮಾಡುತ್ತೇವೆ ಎಂದರು.

ಸರ್ಕಾರ ಬೀಳಿಸುವ ಕೆಲಸಕ್ಕೆ ಕೈಹಾಕಲ್ಲ:
ರಾಜ್ಯದ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಜೆಡಿಎಸ್, ಕಾಂಗ್ರೆಸ್ ಪಕ್ಷದ ನಾಯಕರುಗಳೇ ಕಿತ್ತಾಡಿಕೊಳ್ಳುತ್ತಿದ್ದಾರೆ. ಜನವಿರೋಧಿ ದೋಸ್ತಿಸರ್ಕಾರದ ಶಾಸಕರು, ಸಚಿವರುಗಳು ಪರಸ್ಪರ ಕಿತ್ತಾಟದಿಂದಾಗಿ ಮೈತ್ರಿ ಸರ್ಕಾರ ತಾನಾಗೆ ಬೀಳಲಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರುಗಳು ಅವರವರ ಪಕ್ಷದಲ್ಲಿರುವವರೆಗೆ ಬಿಜೆಪಿ ಸರ್ಕಾರ ಬೀಳಿಸುವ ಕೆಲಸಕ್ಕೆ ಕೈಹಾಕಲ್ಲ. ಒಂದು ವೇಳೆ ಶಾಸಕರೇ ಪಕ್ಷ ಬಿಟ್ಟು ಬಿಜೆಪಿಗೆ ಬಂದರೆ ನಾವು ಸ್ವಾಗತಿಸುತ್ತೇವೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಜಿಲ್ಲೆಯ ನೀರಿನ ಸಮಸ್ಯೆ ಬಗ್ಗೆ ಒತ್ತು ನೀಡುತ್ತಿದ್ದು, ಕೇಂದ್ರ ಸರ್ಕಾರದ ಅಮೃತ ಜಲ ಯೋಜನೆಗೆ ಅನುದಾನ ನೀಡಿದ್ದು, ರಾಜ್ಯ ಸರ್ಕಾರದ ವಿಳಂಬ ನೀತಿಯಿಂದ ನಿಧಾನ ಆಗುತ್ತಿದೆ. ಮೀನುಗಾರಿಕೆ ತೆರೆಳಿ ದುರಂತಕ್ಕೆ ಸಿಕ್ಕಿ ಕಾಣೆಯಾದ ಎಲ್ಲಾ ಮೀನುಗಾರರ ಕುಟಂಬಕ್ಕೆ ಪರಿಹಾರ ನೀಡುವ ಬಗ್ಗೆ ಸಚಿವೆ ನಿರ್ಮಲಾ ಸೀತಾರಮ್ ಜತೆ ಮಾತನಾಡಿ ಪರಿಹಾರ ಕಂಡುಕೊಳ್ಳಲಾಗುತ್ತದೆ. ಕುಂದಾಪುರ ಪ್ಲೇ ಓವರ್ ಹಾಗೂ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದು, ಸಚಿವರ ಜತೆ ಮಾತನಾಡಿ ಕಾಮಗಾರಿ ಸಂಪೂರ್ಣ ಮಾಡಲು ಒತ್ತಡ ಹಾಕುತ್ತೇನೆ ಎಂದರು.

ಕುಂದಾಪುರ ತಾಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್, ಜಿಪಂ ಸದಸ್ಯೆ ಸುಪ್ರಿತಾ, ಕುಂದಾಪುರ ತಾಪಂ ಸದಸ್ಯೆ ರೂಪಾ ಪೈ, ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ಪ್ರಧಾನ ಕಾರ್ಯದರ್ಶಿ ಭಾಸ್ಕರ ಬಿಲ್ಲವ, ಶಂಕರ ಅಂಕದಕಟ್ಟೆ, ಪುರಸಭೆ ಮಾಜಿ ಅಧ್ಯಕ್ಷ ಮೋಹನದಾಸ್ ಶೆಣೈ, ಮೀನುಗಾರಿಕಾ ಪ್ರಕೋಷ್ಠ ಅಧ್ಯಕ್ಷ ಸದಾನಂದ ಬಳ್ಕೂರು, ಸುನೀಲ್ ಶೆಟ್ಟಿ ಇದ್ದರು.